ರಾಜ್ಕುಮಾರೇ ಗ್ರೇಟು

May 1, 2008

ಡಾ.ರಾಜ್ಕುಮಾರ್ ಅವರ ಅಮೋಘ ಅಭಿನಯದ ಚಿತ್ರ ಅಂದಕೂಡಲೇ ತಕ್ಷಣ ನೆನಪಾಗುವುದು ‘ಕಸ್ತೂರಿನಿವಾಸ’. ಆ ಸಿನಿಮಾದ ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು’, ‘ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ’ ಗೀತೆಗಳಿಗೆ ಮನಸೋಲದವರಿಲ್ಲ. ‘ಕಸ್ತೂರಿ ನಿವಾಸ’ದಲ್ಲಿ ರಾಜ್ಕುಮಾರ್ ಅವರ ಅನುಪಮ ಅಭಿನಯ ಕಂಡು ದೇಶಕ್ಕೆ ದೇಶವೇ ಅಭಿಮಾನದಿಂದ ‘ಹ್ಯಾಟ್ಸಾಫ್’ ಹೇಳಿತ್ತು. ಸ್ವಾರಸ್ಯವೆಂದರೆ, ಅದು ರಾಜ್ಕುಮಾರ್ಗೆಂದು ತಯಾರಾಗಿದ್ದ ಕಥೆ ಖಂಡಿತ ಆಗಿರಲಿಲ್ಲ!
ಆ ಕುರಿತ ವಿವರಣೆ ಸ್ವಾರಸ್ಯಕರವಾಗಿದೆ. ಕನ್ನಡದಲ್ಲಿ ಡಾ. ರಾಜ್ ಖ್ಯಾತಿಯ ಉತ್ತುಂಗದಲ್ಲಿದ್ದರಲ್ಲ,ಅದೇ ಸಂದರ್ಭದಲ್ಲಿ ತಮಿಳಿನಲ್ಲಿ ಶಿವಾಜಿಗಣೇಶನ್ ಕೂಡಾ ಸೂಪರ್ಸ್ಟಾರ್ ಅನ್ನಿಸಿಕೊಂಡಿದ್ದರು. ಅವರನ್ನೇ ಗಮನದಲ್ಲಿಟ್ಟುಕೊಂಡು ಒಂದು ಕಥೆ ಸಿದ್ಧಪಡಿಸಿದ್ದಾಯಿತು. ಇನ್ನೇನು ಶೂಟಿಂಗ್ ಆರಂಭಿಸಬೇಕು, ಆ ವೇಳೆಗೆ ಯಾಕೋ ಶಿವಾಜಿಗಣೇಶನ್ ಮನಸ್ಸು ಬದಲಿಸಿದರು. ನನ್ನ ಇಮೇಜ್ಗೆ ಆ ಕಥೆ ಹೊಂದುವುದಿಲ್ಲ. ಅದನ್ನು ಡ್ರಾಪ್ ಮಾಡೋಣ ಅಂದೇಬಿಟ್ಟರು.
ಅದೇ ಸಮಯದಲ್ಲಿ ರಾಜ್ ಅಭಿನಯದ ಹೊಸ ಚಿತ್ರಕ್ಕೆ ಕಥೆ ಹುಡುಕುತ್ತಿದ್ದ ದೊರೆ-ಭಗವಾನ್ ಜೋಡಿಗೆ ವಿಷಯ ಗೊತ್ತಾಯಿತು. ಅವರು ತಕ್ಷಣವೇ ಶಿವಾಜಿಯವರನ್ನು ಸಂಪರ್ಕಿಸಿ, ಆ ಕಥೆಯನ್ನು ಕನ್ನಡದಲ್ಲಿ, ರಾಜ್ಕುಮಾರ್ ಅಭಿನಯದಲ್ಲಿ ತಯಾರಿಸುವುದಾಗಿ ಹೇಳಿ, ಒಪ್ಪಿಗೆ ಪಡೆದರು. ಹಾಗೆ ತಯಾರಾದದ್ದೇ ಕಸ್ತೂರಿನಿವಾಸ!
ಆ ಚಿತ್ರದಲ್ಲಿ ರಾಜ್ಕುಮಾರ್ರ ಅಭಿನಯವನ್ನು ದೇಶಕ್ಕೆ ದೇಶವೇ ಹಾಡಿ ಹೊಗಳಿತಲ್ಲ, ಆಗ ಖುಷಿಯಿಂದ ಚಪ್ಪಾಳೆ ಹೊಡೆದವರ ಪೈಕಿ ಶಿವಾಜಿ ಕೂಡ ಇದ್ದರು. ಮುಂದೆ ತಮ್ಮ ಅಭಿನಯದ ೧೦೦ನೇ ಸಿನಿಮಾ ಯಾವುದಾಗಬೇಕು ಎಂಬ ವಿಷಯವಾಗಿ ಚರ್ಚೆ ಶುರುವಾದಾಗ ಶಿವಾಜಿಗಣೇಶನ್ ಹೇಳಿದರಂತೆ: ‘ಕಸ್ತೂರಿನಿವಾಸ’ವನ್ನೇ ತಮಿಳಿನಲ್ಲಿ ತಯಾರಿಸೋಣ. ಆದರೆ ಒಂದು ಮಾತು: ಆ ಪಾತ್ರದಲ್ಲಿ ರಾಜ್ಕುಮಾರ್ರನ್ನು ಮೀರಿ ನಟಿಸಲು ನನ್ನಿಂದ ಸಾಧ್ಯವೇ ಇಲ್ಲ. ಸುಮ್ಮನೇ ಅವರನ್ನೇ ಕಾಪಿ ಮಾಡಿಬಿಡ್ತೀನಿ. ಅದೊಂದೇ ನನಗೆ ಉಳಿದಿರುವ ದಾರಿ…
-ಮಣೀ

ಪ್ರಿಯ ಅರಮನೆ ನಾಗಶೇಖರ್,

May 1, 2008

ಮಗಾ, ಹ್ಯಾಟ್ಸಾಫ್ ಕಣೋ…
‘ಬೇರೆ ಯಾರೂ ಅಲ್ಲಾರೀ, ಅವ್ನೇ. ಕಪ್ಪಗಿರಲಿಲ್ವಾಆಕ್ಟರ್ರು? ಅವ್ನೇ ನಾಗ್ಶೇಖರ್. ‘ನಿನಗಾಗಿ’, ‘ಮಣಿ’, ‘ಮರುಜನ್ಮ’ ಸಿನಿಮಾಗಳಲ್ಲಿ ಹಾಸ್ಯ ನಟನ ಪಾರ್ಟು ಮಾಡಿದ್ನಲ್ಲ ಅವ್ನೇ ಕಣ್ರೀ. ‘ಅರಮನೆ’ಗೆ ಅವನೇ ನಿರ್ದೇಶಕ. ಮಗ ಫಸ್ಟ್ ಸಿನಿಮಾದಲ್ಲೇ ಜಾಕ್ಪಾಟ್ ಹೊಡೆದಿದ್ದಾನೆ. ‘ಅರಮನೆ’ಯಲ್ಲಿ ಏನಿಲ್ಲ ಹೇಳಿ? ಅಲ್ಲಿ ಕಥೆಯಿದೆ. ಅದರೊಳಗೆ ಸಂತೋಷವಿದೆ. ಸಂಕಟವಿದೆ. ಕನಸಿದೆ. ಕಣ್ಣೀರೂ ಇದೆ. ನಾವು ಅಂದುಕೊಂಡಂತೆ ಏನೂ ನಡೆಯೋದಿಲ್ಲ ಎಂಬ ಸರಳ ಸತ್ಯದ ಅನಾವರಣವಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಈಚೀಚಿನ ದಿನಗಳಲ್ಲಿ ಬಂದ ಬೆಸ್ಟ್ ಸಿನಿಮಾ ಇದು. ಇಂಥದೊಂದು ಸಿನಿಮಾ ಕೊಟ್ಟಿದಾನಲ್ಲ ಆ ನಾಗ್ಶೇಖ್ರ? ಅವ್ನಿಗೆ ಒಂದು ಥ್ಯಾಂಕ್ಸ್ ಹೇಳ್ಬೇಕು. ಒಂದ್ಸಲ ಕಂಗ್ರಾಟ್ಸ್ ಅನ್ನಬೇಕು. ಹಾಗೇ ಸುಮ್ನೆ ಕೈಕುಲುಕಬೇಕು ಅಥವಾ ಸಖತ್ ರಶ್ನಲ್ಲಿ ಅವನು ಕಳೆದು ಹೋಗಿದ್ರೆ ದೂರ ನಿಂತೇ ಒಂದು ಕಿಸ್ ಬಿಸಾಕಬೇಕು…’
ಪ್ರಿಯ ನಾಗಶೇಖರ್, ‘ಅರಮನೆ’ ನೋಡಿ ಬಂದವರೆಲ್ಲ ಹೀಗೆ ಮಾತಾಡುತ್ತಿದ್ದಾರೆ. ಅದೇ ವೇಳೆಗೆ ನೀನು-ಸಿನಿಮಾ ಮೆಚ್ಚಿಕೊಂಡವರಿಗೆಲ್ಲ ಥ್ಯಾಂಕ್ಸ್ ಹೇಳೋದು ಹೇಗೆ ಎಂದು ತಿಳಿಯದೆ ಒದ್ದಾಡ್ತಾ ಇದೀಯ. ಈ ಕಡೆ ಗಾಂನಗರದ ಜನ ನಿನ್ನ ಗೆಲುವನ್ನು ನಂಬಲಾಗದೆ ನಂಬುತ್ತಿದ್ದಾರೆ. ಇಂಥದೊಂದು ಅಪರೂಪದ ಸಿನಿಮಾ ಕೊಟ್ಟವನು ನಿಜಕ್ಕೂ ಇವ್ನಾ? ಇವನೇನಾ? ಇಷ್ಟು ದಿನ ಒಳ್ಳೇ ಕಾರ್ಟೂನ್ ನೆಟ್ವರ್ಕ್ ಥರಾ ಜೋಕು ಮಾಡಿಕೊಂಡು, ಸಿನಿಮಾದಲ್ಲಿ ಜೋಕರ್ ಆಗಿದ್ದ ಹುಡುಗ ಇವನೇನಾ? ಇವನೊಳಗೆ ‘ಅರಮನೆ’ಯಂಥ ಅದ್ಭುತ ಕಥೆಗಳಿವೆಯಾ? ಅವನೊಳಗೊಬ್ಬ ನಿರ್ದೇಶಕ ನಿಜವಾಗ್ಲೂ ಇದ್ದಾನಾ ಎಂದು ಮತ್ತೆ ಮತ್ತೆ ಕೇಳತೊಡಗಿದ್ದಾರೆ. ಅವರಿಗೆ ಕೆಟ್ಟ ಕುತೂಹಲ. ದೊಡ್ಡ ಅನುಮಾನ! ಹೌದಲ್ವಾ? ಅಂಥ ಮಾತು ಕೇಳಿದಾಗೆಲ್ಲ-ಥತ್, ಒಂದು ಸಂತೋಷವನ್ನು ಎಂಜಾಯ್ ಮಾಡೋಕೂ ಈ ಜನ ಬಿಡ್ತಾಯಿಲ್ಲ ಅಂದ್ಕೊಂಡಿರ್ತೀಯ ನೀನು. ಇಂಥ ಸಂದರ್ಭದಲ್ಲೇ ಹಾಗೇ ಸುಮ್ಮನೇ ನಿನ್ನ ಕೈ ಹಿಡಿದು ‘ಅರಮನೆ’ಯ ಹಾದಿಯಲ್ಲೇ ನಡೆದು ಹೋಗಿ ಸುಮ್ನೇ ಒಂದ್ಸಲ ಹಿಂದಿರುಗಿ ನೋಡಬೇಕು. ನಿನ್ನ ತಾಕತ್ತು, ಪರಿಶ್ರಮ, ಅದರ ಹಿಂದಿರುವ ನೋವು ಎಲ್ಲವನ್ನೂ ಎಲ್ಲರಿಗೂ ಹೇಳಿಬಿಡಬೇಕು ಅನ್ನಿಸಿದ್ದರಿಂದ ಈ ಪತ್ರ- ಉಳಿದವರ ಥರಾನೇ ನೀನೂ ಓದ್ತಾ ಹೋಗು. ಓಕೆ?
***
ಹೌದಲ್ವ ನಾಗ್? ಚನ್ನಪಟ್ಟಣ-ಮದ್ದೂರಿನ ಮಧ್ಯೆ ಸಿಗುವ ನಿಡಘಟ್ಟ ನಿನ್ನ ಊರು. ನಿನ್ನ ಬಾಲ್ಯ ಸಂಕಟದ ಮಧ್ಯೇನೇ ಕಳೀತು. ಮುಂದೆ ಮಂಡ್ಯದ ಎಂಜಿನಿಯರಿಂಗ್ ಕಾಲೇಜಿಗೆ ಬಂದೆ. ಸಿವಿಲ್ ಎಂಜಿನಿಯರಿಂಗ್ ಓದ್ತ ಓದ್ತಾನೇ ನಾಟಕದಲ್ಲಿ ಅಭಿನಯಿಸಿದೆ. ಕವಿತೆ ಬರೆದೆ. ಹಾಡು ಹೇಳಿದೆ. ಹತ್ತಲ್ಲ, ನೂರು ಮಂದಿ ಮೆಚ್ಚುವಂತೆ ಜೋಕು ಹೊಡೆದೆ. (ಆಗ್ಲೇ ಲವ್ವು ಮಾಡಿದ್ಯಾ? ಅದರಲ್ಲಿ ಪಲ್ಟಿ ಹೊಡೆದ್ಯಾ? ಗೊತ್ತಿಲ್ಲ) ಹಿಂದೇನೇ ಡಿಸ್ಟಿಂಕ್ಷನ್ನಲ್ಲಿ ಡಿಗ್ರಿ ಮುಗಿಸ್ದೆ. ಓಹ್, ಮುಂದೆ ಇವ್ನೆಲ್ಲೋ ಲೆಕ್ಚರರ್ ಆಗ್ತಾನೆ ಅಂದುಕೊಂಡ್ರೆ, ನೀನು ಸೀದಾ ಬೆಂಗಳೂರಿಗೆ ಬಂದೆ. ಸಿನಿಮಾದ ಹುಚ್ಚಿಗೆ ಬಿದ್ದೆ. ಅಭಿನಯ ತರಂಗ ಸೇರಿದೆ, ನಟನೆ ಕಲಿತೆ. ನಗಿಸುವುದು ಕಲಿತೆ. ಟೈಮಿಂಗು ತಂತಾನೇ ಒಲಿದು ಬಂತು. ನೋಡ್ತ ನೋಡ್ತಾನೇ ಟಿ.ವಿ. ಸೀರಿಯಲ್ನಲ್ಲಿ ಕಾಣಿಸಿಕೊಂಡೆ. ಮುಂದೆ ಗಾಂಬಜಾರ್ಗೆ ಹತ್ತಿರವಿದ್ದ ನಾಗಸಂದ್ರ ಸರ್ಕಲ್ನಲ್ಲಿ ಒಂದು ರೂಮು ಮಾಡಿದೆ. ಆ ವೇಳೆಗೆ ನಟರಾಗಬೇಕು ಎಂಬ ಹುಚ್ಚು ಅಂಟಿಸಿಕೊಂಡಿದ್ದ ಈ ಕಾಮಿಡಿ ಗಣೇಶು, ಆ ಶ್ರೀನಗರ ಕಿಟ್ಟಿ ನಿನ್ನ ಜತೆಗಾರರಾಗಿದ್ರು. ನೀವು ಮೂವರೂ ಜತೆಗಿದ್ದಾಗ ಅವರದು ಆಕ್ಟಿಂಗು. ನಿನ್ನದು ಡೈರೆಕ್ಷನ್ನು. ಮಧ್ಯೆ ಮಧ್ಯೆ ಹಾಸ್ಯದ ಹೆಸರಲ್ಲಿ ಅಪಹಾಸ್ಯ! ಆಗೆಲ್ಲ ನೀವು ಆಡಿದ ಮಾತು, ಕಂಡ ಕನಸು, ಬರೆದ ಕವಿತೆ, ಮರೆಯಲಾಗದ ವ್ಯಥೆ… ಒಂದಾ, ಎರಡಾ? ಅದನ್ನೆಲ್ಲ ಹೇಳಿಕೊಳ್ಳಲು ನೀವೇನೋ ರೆಡಿ ಇದ್ರಿ. ಆದರೆ ಕೇಳುವವರೇ ಇರಲಿಲ್ಲ. ಹೌದಲ್ವ ನಾಗ್?
ಬಹುಶಃ ನಿನಗೆ ಚಿತ್ರರಂಗದಿಂದ ಕರೆ ಬಂದದ್ದು ಇದೇ ದಿನಗಳಲ್ಲಿ. (ಅಥವಾ ಅದಕ್ಕೂ ಮೊದಲಾ? ಗೊತ್ತಿಲ್ಲ…!) ಸಿನಿಮಾದ ಹೆಸರು-ನಿನಗಾಗಿ! ಅವತ್ತಿನ ಅವಮಾನವನ್ನು ಬಹುಶಃ ನೀನು ಜನ್ಮ ವಿಡೀ ಮರೆಯಲಾರೆ ಅನಿಸ್ತದೆ. ಹೌದಲ್ವ? ಆ ಸಿನಿಮಾದಲ್ಲಿ ಹಾಸ್ಯ ನಟನ ಪಾತ್ರಕ್ಕೇಂತ ಕರೆಸ್ಕೊಂಡ್ರು. ಅವನ್ಯಾರೋ ಮೇಕಪ್ ಮ್ಯಾನು ನಿನ್ನನ್ನು ಕಂಡದ್ದೇ ‘ಹೋಗ್ ಹೋಗೊ ಕರಿಯಾ… ತಂದಿರೋ ಬಣ್ಣಾನೆಲ್ಲ ಮೆತ್ತಿದ್ರೂ ನೀನು ಕೆಂಪಗೆ ಕಾಣ್ಸೋದಿಲ್ಲ. ನಿಂಗೆ ಮೇಕಪ್ ಬೇರೆ ಕೇಡು’ ಅಂದುಬಿಟ್ಟ. ತಿಂಡಿ ಕೊಡಲು ಬಂದವನೂ ಗೇಲಿ ಮಾಡಿದ. ಅವತ್ತು ಇಡೀ ದಿನ ತಿಂಡಿಯಿಲ್ಲ. ಊಟ ಸಿಕ್ತಾ? ಅದೂ ನೆನಪಿಲ್ಲ. ಆದರೆ, ಅದನ್ನೆಲ್ಲ ಹೇಳಿಕೊಂಡು ನೀನು ಅಳಲಾರದೇ ನಕ್ಕಿದ್ದು ಮಾತ್ರ ಚನ್ನಾಗಿ ನೆನಪಿದೆ. ಬಹುಶಃ ಬೇರೆಯವರಾಗಿದ್ರೆ ಅವತ್ತೇ ಚಿತ್ರರಂಗಕ್ಕೆ ಗುಡ್ಬೈ ಹೇಳಿ ಹೋಗಿಬಿಡ್ತಿದ್ರು. ಆದ್ರೆ ನೀನು-ಭಂಡ. ಇಲ್ಲೇ ನಿಂತೆ. ಅವಮಾನಗಳನ್ನೆಲ್ಲ ಮರೆತೆ. ಉಕ್ಕಿ ಬಂದ ಕಂಬನಿಯನ್ನು ಕಣ್ಣೊಳಗೇ ಇಂಗಿಸಲು ಕಲಿತೆ. ನೋವನ್ನೆಲ್ಲಾ ಮರೆತೆ.
ಅಷ್ಟಾಯಿತಲ್ಲ, ನಿನ್ನೊಳಗಿದ್ದ ಕಲಾವಿದ ಎದ್ದು ನಿಂತ. ಅವನು ಮಾತಾಡಿ ನಗಿಸಿದ. ಮಾತಾಡದೇ ನಗಿಸಿದ. ಹೂಂ ಕಣೋ, ಒಂದೊಂದ್ಸಲ ನಿನ್ನ ಹಾವಭಾವ ಕಂಡ್ರೆ ಸಾಕು, ನಗು ಬಂದುಬಿಡ್ತಿತ್ತು. ನಿನ್ನ ಅದ್ಭುತ ಟೈಮಿಂಗ್ ಕಂಡಾಗಲೆಲ್ಲ ಮೆಚ್ಚುಗೆ-ಹೊಟ್ಟೆ ಉರಿ ಜತೆಜತೆಗೇ ಆಗ್ತಾ ಇತ್ತು. ಈ ಮಧ್ಯೆಯೇ ನೀನು ಸದ್ದಿಲ್ಲದೆ ಐವತ್ತೈದು ಸಿನಿಮಾಗಳನ್ನು ಮುಗಿಸಿಬಿಟ್ಟೆ. ಒಂದು ಐಡೆಂಟಿಟಿ ಗಳಿಸಿಕೊಂಡೆ. ಅದುವರೆಗೂ ಅವನ್ಯಾರೋ ನಾಗಶೇಖ್ರ ಅಂತಿದ್ದ ಜನ ‘ಇವ್ರೇ ಕಣ್ರೀ ನಾಗಶೇಖರ್’ ಎಂದು ಗುರುತಿಸುವ ಮಟ್ಟಿಗೆ ಬದಲಾಗಿಬಿಟ್ಟೆ. ಮುಂದೆ ನೀನು ಒಂದೆರಡು ಕಥೆ ಬರೆದರೆ, ಅವು ಇನ್ನೆಲ್ಲೋ ಕಳೆದು ಹೋದವು. ಮುಂದೆ ಒಂದು ಸಿನಿಮಾಕ್ಕೆ ಹಾಡು ಬರೆದಾಗ ಇದೇ ಗಾಂನಗರದ ಜನ ಹುಬ್ಬೇರಿಸಿದ್ದರು. ಆಗಲೇ ‘ಅರಮನೆ’ ಹೆಸರಿನ ಕಥೆ ರೆಡಿ ಮಾಡಿದೀನಿ. ಅದನ್ನು ನಾನೇ ನಿರ್ದೇಶಿಸ್ತೀನಿ ಅಂದೆ ನೋಡು-ಆಗಲೂ ಜನ ತಲೆಗೊಂದು ಮಾತಾಡಿದ್ರು.
ಆದರೆ, ‘ಅರಮನೆ’ಯ ಶೂಟಿಂಗು ಶುರುವಾದ ಒಂದೆರಡೇ ದಿನದಲ್ಲಿ ಹಿರಿಯ ನಟ ಅನಂತನಾಗ್ ನಿನ್ನ ಬೆನ್ನು ತಟ್ಟಿದ್ರು. ಜತೆಗಿದ್ದವರ ಮುಂದೆ- ‘ಈ ಹುಡುಗ ಸಾಮಾನ್ಯ ಅಲ್ಲ, ಭಾಳಾ ಪ್ರಚಂಡ. ಇವನ ನಿರೀಕ್ಷೆಯ ಮಟ್ಟಕ್ಕೆ ಅಭಿನಯಿಸ್ತೀನಾ ಎಂಬ ಅನುಮಾನ ನನ್ನನ್ನು ಕಾಡಿದೆ. ಅರಮನೇಲಿ ಖಂಡಿತ ಹೊಸತನವಿದೆ. ಅದು ಎಲ್ಲರಿಗೂ ಇಷ್ಟವಾಗೇ ಆಗುತ್ತೆ’ ಎಂದಿದ್ದರು!
ಛಿo. ಅವರ ಮಾತೀಗ ನಿಜವಾಗಿದೆ. ಪ್ರೀತಿ, ಸ್ನೇಹ, ಮೋಹ, ಪ್ರೇಮ, ಕಾಲೇಜು, ಅಲ್ಲಿನ ಕಣ್ತುಂಬೋ ಫಿಗರ್ರು, ನಾಯಕನ ಹುಡುಗಾಟ, ಅವನ ಕ್ಯಾಮರಾದ ಮೆರೆದಾಟ, ಚಿತ್ರದುದ್ದಕ್ಕೂ ಇರುವ ಕಲರ್ ಕಲರ್ ಕಾಮನ ಬಿಲ್ಲು, ಆಗೊಮ್ಮೆ ಈಗೊಮ್ಮೆ ಕಂಡು, ಕೆಣಕುವ ಬ್ಲ್ಯಾಕ್ ಅಂಡ್ ವೈಟ್ನ ಮೋಹಕ ನೆರಳು ಎಲ್ಲರಿಗೂ ಇಷ್ಟವಾಗಿ ಬಿಟ್ಟಿದೆ. ಒಂದು ದೊಡ್ಡ ಖುಷಿಯೆಂದರೆ- ‘ಅರಮನೆ’ಯಲ್ಲಿ ಹಿಂಸೆಯಿಲ್ಲ. ಡಿಶುಂಡಿಶುಂ ಫೈಟಿಂಗಿಲ್ಲ. ಐಟಂ ಸಾಂಗ್ ಇಲ್ಲ. ಡಬ್ಬಲ್ ಮೀನಿಂಗ್ ಹಾಸ್ಯವಿಲ್ಲ. ಆದರೆ ಇಡೀ ಸಿನಿಮಾಕ್ಕೆ ಒಂದು ಸ್ಪೀಡ್ ಇದೆ. ನಾಯಕನ ಪಾತ್ರದಲ್ಲಿ ನಾವೇ ಇದೀವಿ! ನಮ್ಮ ಮನಸ್ಸಿದೆ. ನಮ್ಮದೇ ತುಂಟಾಟವಿದೆ. ನಮ್ಮದೇ ಆಸೆ ಮತ್ತು ಕಣ್ಣೀರಿದೆ. ಅನಂತನಾಗ್ ಎಂಬ ಮುದುಕನ ಪಾತ್ರ ಬೇಡ ಬೇಡವೆಂದರೂ ಊರಲ್ಲಿರೋ ಒಂಟಿ ಅಜ್ಜನ ನೆನಪು ತರುತ್ತೆ. ಒಂದೊಂದು ಸಂದರ್ಭದಲ್ಲಂತೂ ನಮಗೇ ಗೊತ್ತಿಲ್ಲದಂತೆ ಕೆನ್ನೆ ಒದ್ದೆಯಾಗುತ್ತೆ. ಪಾಸ್ಪೋರ್ಟ್ ಸೈಜಿನ ಫೋಟೊ ತೆಗೆಯುವ ದೃಶ್ಯದಿಂದ ಶುರುವಾಗಿ, ಗ್ರೂಪ್ ಫೋಟೊ ತೆಗೆವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತೆ. ಕಡೆಯ ದೃಶ್ಯವಂತೂ ತುಂಬಾನೇ ಸಂಕಟ ಕೊಡುತ್ತೆ. ಅದೇ ಕಾರಣಕ್ಕೆ- ಮೊದಲು ನಗುತ್ತಾ ನೋಡಲು ಕುಳಿತವರು ಕಡೆಗೆ ಕಣ್ಣೀರು ಒರೆಸ್ಕೊಂಡು ಎದ್ದು ಬರ್ತಾರೆ. ಇಂಥದೊಂದು ಬೊಂಬಾಟ್ ಸಿನಿಮಾ ಕೊಟ್ಟಿದೀಯಲ್ಲ-ಮಗಾ, ಹ್ಯಾಟ್ಸಾಫ್ ಕಣೋ…
***
ಹೋಲ್ಡಾನ್, ಹೋಲ್ಡಾನ್. ಇಷ್ಟು ಹೇಳಿದ ಮಾತ್ರಕ್ಕೆ ‘ಅರಮನೆ’ ಅದ್ಭುತ ಸಿನಿಮಾ ಎಂಬ ನಿರ್ಧಾರಕ್ಕೆ ಖಂಡಿತ ಬರಬೇಡ. ಅದು ಅದ್ಭುತವಾಗಿಲ್ಲ ನಿಜ. ಆದರೆ ಒಂಥರಾ ಚೆನ್ನಾಗಿದೆ. ಒಂಥರಾ ಡಿಫರೆಂಟ್ ಆಗಿದೆ. ಆದ್ರೂ ಒಂದೊಂದ್ಸಲ ಬೋರ್ ಅನಿಸುತ್ತೆ. ಗೊತ್ತಾಯ್ತಾ? ಇದಿಷ್ಟೂ ನೆನಪಿರಲಿ. ಈ ಗೆಲುವು ನಿನ್ನಲ್ಲಿ ಅಹಂಕಾರ ತಾರದಿರಲಿ. ತಲೆ ಭುಜದ ಮೇಲೇ ಇರಲಿ. ಈವರೆಗೂ ನಿನ್ನನ್ನು ಕಾಪಾಡಿದ ಅಪರೂಪದ ವಿನಯ ಜತೆಜತೆಗೇ ಉಳಿಯಲಿ. ನಂಬಪ್ಪಾ, ನೀನೀಗ ಗಾಂನಗರದಲ್ಲಿ ಹತ್ತಿ ಮುಗಿಸಿರೋದು ಬರೀ ಹತ್ತೇ ಮೆಟ್ಟಿಲು. ಹತ್ತಬೇಕಿರೋದು ಇನ್ನೂ ಸಾವಿರ ಇದೆ. ಅದು ನೆನಪಿರಲಿ. ಒಂದು ಹಿಟ್ ಕೊಟ್ಟವನಿಂದ ಅದಕ್ಕಿಂತ ದೊಡ್ಡ ಮಟ್ಟದ ಸಿನಿಮಾನ ಜನ ನಿರೀಕ್ಷಿಸ್ತಾರೆ. ಅಂಥದೊಂದು ಸವಾಲು ಈಗ ನಿನ್ನ ಮುಂದೇನೂ ಇದೆ. ಹಾಗಾಗಿ ಹುಶಾರಾಗಿ ಹೆಜ್ಜೆ ಇಡು. ಮೊದಲ ಸಿನಿಮಾದಲ್ಲೇ ಜಾಣ ಅನ್ನಿಸ್ಕಂಡಿದೀಯ. ಮುಂದೆ ನೀನೇನಾದ್ರೂ ಸೋತರೆ ‘ಜಾರಿ ಬಿದ್ದ ಜಾಣ’ ಅನ್ನುತ್ತೆ ಚಿತ್ರರಂಗ. ಅದಕ್ಕೇ- ಅರಮನೆಯಲ್ಲಿರೋ ಓರೆ ಕೋರೆಗಳನ್ನು ಸುಮ್ನೇ ಒಂದಪಾ ಗಮನಿಸು. ಮುಂದಿನ ಸಿನಿಮಾದಲ್ಲಿ ಅಂಥದೇನೂ ಇರದ ಹಾಗೆ ನೋಡ್ಕೋ. ಹಾಗೆ ಮಾಡಿದ್ರೆ ಮಾತ್ರ ನಿನ್ನ ಗೆಲುವಿಗೆ, ನಿನ್ನ ಸಂಭ್ರಮಕ್ಕೆ, ನಿನ್ನ ಸಾಹಸಕ್ಕೆ, ಮುಖ ಮುಚ್ಚಿಕೊಂಡು ಸುರಿಸಿದ ಕಂಬನಿಗೆ ಒಂದು ಅರ್ಥ ಇರುತ್ತೆ.
ಅಂದ ಹಾಗೆ ನಾಗ್ಶೇಖ್ರಾ, ಹಿಂದೆ ಇದೇ ಗಾಂನಗರ ನಿನ್ನನ್ನ ‘ಕರಿಯ’ ಎಂದು ಹೀಯಾಳಿಸಿತ್ತಲ್ಲ? ನಿಂಗೆ ತಿಂಡಿ ಕೊಡದೆ, ಬಣ್ಣ ಹಾಕದೆ ಅವಮಾನಿಸಿತ್ತಲ್ಲ? ಅದೇ ಗಾಂನಗರ ಈಗ ‘ಕರಿಯಾ, ಐ ಲವ್ ಯೂ’ ಎಂದು ವರಸೆ ಬದಲಿಸಿದೆ. ಅಂಥ ಮಾತು ಕೇಳಿದಾಗ ಏನನ್ನಿಸ್ತದೆ ನಿಂಗೆ? ಹೆಮ್ಮೆಯಾಗುತ್ತಾ? ಅಥವಾ ಹಳೆಯದೆಲ್ಲಾ ನೆನಪಾಗಿ ಕಣ್ಣೀರು ಬರುತ್ತಾ…
-ಪ್ಲೀಸ್ ಕಣೋ, ‘ಅರಮನೆ’ಲಿ ಕೂತೇ ಪತ್ರ ಬರಿ. ಇವತ್ತಿಗೆ ಇಷ್ಟು ಸಾಕು, ನಮಸ್ಕಾರ.

ನಮ್ಮ ರಾಜ್ಕುಮಾರು..!

May 1, 2008

Rajanna

ಮತ್ತೆ ರಾಜ್ಕುಮಾರ್ ನೆನಪಾಗುತ್ತಿದ್ದಾರೆ.
ನಿಜ ಹೇಳಬೇಕೆಂದರೆ, ಕಳೆದ ಎರಡು ವರ್ಷಗಳ ಅವಯಲ್ಲಿ ಕನ್ನಡಿಗರಿಗೆ ದಿನದಿನವೂ ನೆನಪಾದವರು ಡಾ. ರಾಜ್.ಯಾವುದೋ ಒಂದು ಹಾಡು, ಒಂದು ರಾಗ, ಒಂದು ಸರಸಮಯ ಸಂಭಾಷಣೆ, ಒಂದು ಹೃದಯಂಗಮ ಸನ್ನಿವೇಶ, ಬೆಂಗಳೂರಿನಲ್ಲಿ ನಡೆದ ಯಾವುದೋ ಒಂದು ಹೋರಾಟದ ಮೂಲಕ ನೆನಪಾಗಿಬಿಡುತ್ತಿದ್ದರು/ನೆನಪಾಗಿಬಿಡುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ಎಲ್ಲರದೂ ಒಂದೇ ಉದ್ಗಾರ-ನಮ್ಮ ರಾಜಣ್ಣ ಇನ್ನೊಂದಷ್ಟು ದಿನ ನಮ್ಮ ಜತೆಗಿರಬೇಕಿತ್ತು…
ನಿಮಗೂ ಗೊತ್ತಿರಬಹುದು, ಇವತ್ತಿಗೂ ರಾಜ್ ಅವರನ್ನು ಪ್ರೀತಿಸುವ, ಆರಾಸುವ, ಅಭಿಮಾನದಿಂದ ನೋಡುವವರ ಪೈಕಿ ಪುರುಷರು ಎಷ್ಟು ಮಂದಿ ಇದ್ದಾರೋ, ಅಷ್ಟೇ ಸಂಖ್ಯೆಯಲ್ಲಿ ಹೆಂಗಸರಿದ್ದಾರೆ. ಇವತ್ತಿನ ಹುಡುಗಿಯರನ್ನು; ಶಾಪಿಂಗ್ ಮಾಡುವುದೇ ಜೀವನ ಎಂದುಕೊಂಡಿರುವ ಗೃಹಿಣಿಯರನ್ನು ಈ ಕಡೆ ಕರೆದು, ನಟರ ಪೈಕಿ ನಿಮಗೆ ಯಾರಿಷ್ಟ ಎಂದು ಕೇಳಿ ನೋಡಿ- ‘ನಮಗೆ ರಾಜ್ಕುಮಾರೇ ಇಷ್ಟ’ ಎನ್ನುವ ಉತ್ತರವೇ ಅವರಿಂದ ಬರುತ್ತದೆ.
ರಾಜ್ ಅವರ ಹೆಚ್ಚುಗಾರಿಕೆ ಇರುವುದೇ ಅಲ್ಲಿ. ಏಕೆಂದರೆ, ಅವರ ಅಭಿನಯದ ಅದೆಷ್ಟೋ ಸಿನಿಮಾಗಳಲ್ಲಿ ನಾಯಕಿಯರು ಸೊಕ್ಕಿನ ಸುಂದರಿಯರಾಗಿರುತ್ತಾರೆ. ಉಡಾಫೆ ಮನೋಭಾವ ಹೊಂದಿರುತ್ತಾರೆ. ನಾನುಂಟು, ಮೂರು ಲೋಕವುಂಟು ಎಂದು ಮೆರೆಯುತ್ತಿರುತ್ತಾರೆ. ಅಂಥ ಸಂದರ್ಭದಲ್ಲೆಲ್ಲ ಆ ಅಮ್ಮಣ್ಣಿಯರ ಸೊಕ್ಕು ಮುರಿಯುವ, ಅವರಿಗೆ ಬುದ್ಧಿ ಕಲಿಸುವ, ಏಯ್, ಹೋಗೆ, ಹೋಗೆ ಎಂದು ಆವಾಜ್ ಹಾಕುವ ಕಡೆಗೊಮ್ಮೆ ಅವರನ್ನು ಒಲಿಸಿಕೊಳ್ಳುವ ಪಾತ್ರ ರಾಜ್ಕುಮಾರ್ದು. ಅದಕ್ಕೆ ಉದಾಹರಣೆಯಾಗಿ, ಒಂದು ‘ಸಂಪತ್ತಿಗೆ ಸವಾಲ್’, ಒಂದು ‘ಬಹದ್ದೂರ್ ಗಂಡು’ ಅಥವಾ ‘ವಸಂತಗೀತ’ ಸಿನಿಮಾವನ್ನು ಉದಾಹರಿಸಬಹುದು. ವಿಶೇಷವೆಂದರೆ, ನಾಯಕಿಯರ ಅಹಮಿಕೆ ಇಳಿಸುವ ಹೀರೊ ಆಗಿ ರಾಜ್ ಮೆರೆದಾಗಲೆಲ್ಲ ಹುಡುಗಿಯರೂ ಚಪ್ಪಾಳೆ ಹೊಡೆಯುತ್ತಿದ್ದರು. ‘ಏನ್ ಮಾಕು ನೋಡ್ರೇ ಅವಳಿಗೇ’ ಎಂದು ಕಾಮೆಂಟ್ ಮಾಡುತ್ತಾ ಹೀರೊ ಪರ ಮಾತಾಡುತ್ತಿದ್ದರು! ನಾಯಕಿಯ ಪರ ಹೆಂಗಸರ್ಯಾರೂ ಮಾತೇ ಆಡುತ್ತಿರಲಿಲ್ಲವಲ್ಲ ಯಾಕೆ ಅಂದರೆ- ಅವರ ಕಲ್ಪನೆಯ ಹೀರೊ ರಾಜ್ಕುಮಾರ್ ರೂಪದಲ್ಲಿಯೇ ತೆರೆಯ ಮೇಲೆ ಬಂದಿರುತ್ತಿದ್ದ!
ಒಬ್ಬ ವ್ಯಕ್ತಿಯಾಗಿ ರಾಜ್ ಅವರನ್ನು ತುಂಬ ಹತ್ತಿರದಿಂದ ಕಂಡವರು ಕಡಿಮೆ. ಆದರೆ, ಒಂದು ಪಾತ್ರವಾಗಿ ಇಡೀ ಚಿತ್ರರಂಗವನ್ನೇ ಕಾಡಿದವರು ರಾಜ್. ಇವತ್ತಿಗೂ ಸತ್ಯ ಹರಿಶ್ಚಂದ್ರ, ಮಯೂರ, ಬಬ್ರುವಾಹನ, ಪುರಂದರದಾಸರು, ಕನಕದಾಸರು, ಸಂತ ತುಕಾರಾಮ, ಕವಿ ಕಾಳಿದಾಸ… ಮುಂತಾದವರು ‘ಹೀಗೆಯೇ ಇದ್ದರು’ ಎಂದು ಹೇಳಲಾಗುವುದಿಲ್ಲ. ಆದರೆ ಆ ಎಲ್ಲರೂ ಹೇಗಿದ್ದಿರಬಹುದು ಎಂದು ಕಲ್ಪಿಸಿಕೊಂಡಾಗ ಮಾತ್ರ ಕಣ್ಣೆದುರು ರಾಜ್ಕುಮಾರ್ ಚಿತ್ರವೇ ಬಂದು ನಿಲ್ಲುತ್ತದೆ. ನಿಜಕ್ಕೂ ಶ್ರೀ ಕೃಷ್ಣದೇವರಾಯ ಸ್ವಲ್ಪ ಕುಳ್ಳಕ್ಕಿದ್ದ. ಸ್ವಲ್ಪ ಡುಮ್ಮಣ್ಣನ ಥರಾ ಇದ್ದ. ಆತನ ಮುಖದಲ್ಲಿ ಅಲ್ಲಲ್ಲಿ ಸಿಡುಬಿನ ಕಲೆಗಳಿದ್ದವು ಎನ್ನುತ್ತದೆ ಇತಿಹಾಸ. ಆದರೆ ಕೃಷ್ಣದೇವರಾಯ ಯಾವುದೇ ಕಾರಣಕ್ಕೂ ಹಾಗಿರಲಿಲ್ಲ. ಆತ ಥೇಟ್ ನಮ್ಮ ರಾಜಕುಮಾರ್ ಥರಾನೇ ಇದ್ದ ಎಂದು ವಾದ ಹೂಡುತ್ತದೆ ಮನಸ್ಸು. ಈ ಮಾತು ಅತ್ಲಾಗಿರಲಿ. ರಾಜ್ ಅಲ್ಲದ ಬೇರೊಂದು ಮುಖದ ಹರಿಶ್ಚಂದ್ರನನ್ನೋ, ಕವಿ ಕಾಳಿದಾಸನನ್ನೋ, ಮಯೂರವರ್ಮನನ್ನೋ, ಗಂಧದ ಗುಡಿಯ ‘ನಾವಾಡುವ ನುಡಿಯೇ’ ಹಾಡನ್ನೋ ಸುಮ್ಮನೇ ಕಲ್ಪಿಸಿಕೊಳ್ಳಿ ನೋಡೋಣ…
***
ನೆನಪು ಮಾಡಿಕೊಂಡರೆ ಇವತ್ತಿಗೂ ಬೆರಗಾಗುತ್ತದೆ. ಒಬ್ಬ ಹೀರೊ ಒಂದೆರಡು ವರ್ಷಗಳ ಕಾಲ ಸ್ಟಾರ್ವ್ಯಾಲ್ಯೂ ಉಳಿಸಿಕೊಳ್ಳೋದು. ಕಷ್ಟ, ಹಾಗಿರುವಾಗ ಗಾಂನಗರದ ಎಲ್ಲ ಚಿಲ್ಲರೆತನದಿಂದಲೂ ಮೈಲು ದೂರವಿದ್ದ ಡಾ. ರಾಜ್, ಒಂದೆರಡಲ್ಲ ಐವತ್ತೂ ಚಿಲ್ಲರೆ ವರ್ಷಗಳ ಕಾಲ ಕನ್ನಡ ಚಿತ್ರರಂಗದ ಸೂಪರ್ಸ್ಟಾರ್ ಆಗಿಯೇ ಮೆರೆದರಲ್ಲ? ಸಾಧನೆಯ ಶಿಖರದಲ್ಲಿ ಹತ್ತಿ ಕುಳಿತಾಗಲೂ ಅದೇ ಹಳ್ಳಿ ಹೈದನ ಅಮಾಯಕತೆ ಉಳಿಸಿಕೊಂಡರಲ್ಲ? ಅಭಿಮಾನಿಗಳಲ್ಲಿಯೇ ದೇವರನ್ನು ಕಂಡರಲ್ಲ? ಕನ್ನಡಕ್ಕೆ ಕಷ್ಟ ಬಂದಾಗಲೆಲ್ಲ ‘ನಾನಿರುವುದೇ ನಿಮಗಾಗಿ’ ಎಂಬ ಒಂದೇ ಹಾಡಿನಿಂದ ಹೋರಾಟದ ಕಿಚ್ಚು ಹಚ್ಚುತ್ತಿದ್ದರಲ್ಲ? ಓದಿದ್ದು ಬರೀ ಮೂರನೇ ತರಗತಿಯಾದರೂ, ಪ್ರತಿ ಸಿನಿಮಾದಲ್ಲೂ ಸಮಾಜಕ್ಕೆ ಒಂದೇ ಸಂದೇಶವಿರಲಿ ಎಂದು ಯೋಚಿಸುತ್ತಿದ್ದರಲ್ಲ? ನಿರ್ಮಾಪಕರೇ ನಮ್ಮ ಅನ್ನದಾತರು ಎಂದು ಕಡೆಯ ತನಕ ಹೇಳಿದರಲ್ಲ? ಅಭಿಮಾನಿಗಳ ಮೆರೆದಾಟ ಕಂಡಾಗಲೆಲ್ಲ ಮಗುವಿನಂತೆ ಕೈ ಮುಗೀತಿದ್ದರಲ್ಲ? ಬರೀ ಕನ್ನಡದಲ್ಲಿ ನಟಿಸಿಯೇ ಇಡೀ ಜಗತ್ತಿನ ಗಮನ ಸೆಳೆದರಲ್ಲ? ಖಚಿರಿ is gಡಿeಚಿಣ ಚಿಟಿಜ gಡಿeಚಿಣesಣ ಅನ್ನಲು ಇಷ್ಟು ಸಾಕಲ್ಲವೆ?
ಸುಳ್ಳಲ್ಲ, ರಾಜ್ ಇಲ್ಲದೆ ನಾಡು ಬಡವಾಗಿದೆ. ಕನ್ನಡಮ್ಮ ತಬ್ಬಲಿಯಾಗಿದ್ದಾಳೆ. ರಾಜಣ್ಣನ ಸ್ಥಾನ ತುಂಬುವುದು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಈ ಎರಡು ವರ್ಷದಲ್ಲಿ ಇನ್ನೂರು ಬಾರಿಯಾದರೂ ಮತ್ತೆ ಮತ್ತೆ ಸಾಬೀತಾಗಿದೆ. ನಿಜ ಹೇಳಲಾ? ರಾಜ್ ಇವತ್ತು ನಮ್ಮೊಂದಿಗಿದ್ದಿದ್ದರೆ- ‘ಹೊಗೇನಕಲ್ ವಿವಾದ’ದಲ್ಲಿ ನಾವು ಸೋಲುತ್ತಿರಲಿಲ್ಲ. ಅಣ್ಣಾವ್ರು ಇದ್ದಾರೆ ಎಂಬ ಒಂದೇ ಒಂದು ಕಾರಣದಿಂದ ಆ ರಜನಿಕಾಂತ್ ಪ್ರತಿಭಟನೆಗೇ ಬರುತ್ತಿರಲಿಲ್ಲ. ಗಡಿ ವಿಷಯವಾಗಿ ಮರಾಠಿ ಪುಂಡರು ಅಬ್ಬರಿಸಿದಾಗ-ದೇವರಾಣೆಗೂ ರಾಜ್ ಸುಮ್ನೆ ಇರುತ್ತಿರಲಿಲ್ಲ. ಹಾಗೆಯೇ ‘ಭಕ್ತ ಅಂಬರೀಷ’ ಬೇಕು ಅಂದರೆ, ಅವರು ನಿರಾಕರಣೆಯ ಮಾತಾಡುತ್ತಿರಲಿಲ್ಲ. ಹೋರಾಟವನ್ನೇ ಮರೆತವರಂತೆ ಕನ್ನಡಿಗರು ಮೂಲೇಲಿ ಕೂರುತ್ತಿರಲಿಲ್ಲ.
ಒಂಥರಾ ಹೆಮ್ಮೆಯಿಂದಾನೇ ಹೇಳ್ತಿದೀನಿ. ನಾನೂ ಕೂಡ ರಾಜ್ಕುಮಾರ್ ಅಭಿಮಾನಿ. ಅವರಂತೆ ನನ್ನನ್ನು ಕಾಡಿದ ನಟ ಇನ್ನೊಬ್ಬನಿಲ್ಲ. ಹಳೇ ಕಾಲದ ಮಂಜುಳಾನೋ, ಲೀಲಾವತಿಯೋ, ಆರತಿಯೋ, ಈಚೀಚಿನ ಐಶ್ವರ್ಯ ರೈಯೋ, ದೀಪಿಕಾ ಪಡುಕೋಣೆನೋ ನನಗೆ ಗ್ರೇಟ್ ಅನ್ನಿಸಲೇ ಇಲ್ಲ. ನಟನೆಯ ವಿಷಯದಲ್ಲಿ, ವಿನಯದ ವಿಚಾರದಲ್ಲಿ ಹೀರೊ ನಂಬರ್ ಒನ್ ಅಂದುಕೊಂಡಾಗಲೆಲ್ಲ ರಾಜಣ್ಣನೇ ನೆನಪಾಗ್ತಾರೆ. ಒಂದು ವೇಳೆ ರಾಜ್ ಇವತ್ತು ಇದ್ದಿದ್ರೆ- ನಾನು ಅವರ ಮುಂದಿರುತ್ತಿದ್ದೆ. ಆ ಗಿಜಿಗಿಜಿ ಜನಸಂದಣಿಯ ಮಧ್ಯೆಯೇ ಅದು ಹೇಗೋ ಹೋಗಿ ಹ್ಯಾಪಿ ಬರ್ತ್ ಡೇ ಟು ಯೂ ಅಂದಿರುತ್ತಿದ್ದೆ! ಹಿಂದೆಯೇ ‘ನನ್ನ ಹೆಸ್ರು ಪೂರ್ವಿ’ ಅಂದಿರುತ್ತಿದ್ದೆ. ಮರುಕ್ಷಣವೇ ಅಣ್ಣಾವ್ರು - ‘ನಿನ್ನ ಹೆಸ್ರು ಚೆನ್ನಾಗಿದೆ ಕಂದಾ, ನಿನ್ನ ಥರಾನೇ’ ಅನ್ನುತ್ತಿದ್ದರು. ನನ್ನೊಂದಿಗೆ ಫೋಟೊಗೆ ನಿಲ್ಲುತ್ತಿದ್ದರು. ಸಿಹಿ ತಿನ್ನಿಸುತ್ತಿದ್ದರು. ಅದನ್ನೆಲ್ಲ ಸುಮ್ಮನೇ ಕಲ್ಪಿಸಿಕೊಂಡು ಹೇಳ್ತಿದೀನಿ- ಅಣ್ಣಾ, ನೀವು ಜತೆಗಿರಬೇಕಿತ್ತು…. ಅದ್ಸರಿ, ಓದ್ತಾ ಓದ್ತಾನೇ ನೀವ್ಯಾಕೆ ಸಪ್ಪಗಾಗಿಬಿಟ್ರಿ?

…..ರಾಮನವಮಿ ಉತ್ಸವದಲ್ಲಿ ಅವನು ಕವಿತೆ ಓದುತ್ತಿದ್ದ!

April 22, 2008

sharukh

ಇವತ್ತು ಬಾಲಿವುಡ್ನ ಬಾದ್ಷಾ ಎಂದು ಖ್ಯಾತಿ ಪಡೆದಿರುವ ಶಾರೂಕ್ ಖಾನ್ ದಿಲ್ಲಿಯವನು ಎಂಬುದು ಬಹುಶಃ ಬಹುಮಂದಿಗೆ ಗೊತ್ತಿರಲಿಕ್ಕಿಲ್ಲ. ಅದಕ್ಕಿಂತ ಹೆಚ್ಚಿನ ಸ್ವಾರಸ್ಯದ ಸಂಗತಿ ಎಂದರೆ ಇದೇ ಶಾರೂಕ್ ಖಾನ್ ಚಿಕ್ಕಂದಿನಲ್ಲಿ ಪದ್ಯ ಬರೆಯುತ್ತಿದ್ದ ಮತ್ತು ಆ ಪದ್ಯಗಳನ್ನು ರಾಮನವಮಿ ಉತ್ಸವಗಳಲ್ಲಿ ಓದಿ ಬಹುಮಾನ ಪಡೆಯುತ್ತಿದ್ದ ಎಂಬುದು!
ಎಲ್ಲಿಯ ಶಾರೂಕ್ ಖಾನ್, ಎಲ್ಲಿಯ ಕವಿತೆ, ಇದೆಲ್ಲಿಯ ರಾಮಲೀಲಾ ಉತ್ಸವ ಎಂದು ಬೆರಗಾದಿರಾ? ಆ ಸ್ವಾರಸ್ಯಕರ ಸಂಗತಿಯ ವಿವರಣೆ ಹೀಗಿದೆ, ಕೇಳಿ :
ಶಾರೂಕ್ ಖಾನ್ನ ತಂದೆಯ ಹೆಸರು ಮೀರ್ತಾಜ್ ಮುಹಮ್ಮದ್. ಆತ ವೃತ್ತಿಯಿಂದ ವಕೀಲ. ವಿಪರೀತ ಓದಿಕೊಂಡಿದ್ದ ಮೀರ್, ಬಾಲ್ಯದಿಂದಲೇ ಗಾಲಿಬ್ ಹಾಗೂ ಇಕ್ಬಾಲ್ರ ಗಜಲ್ಗಳನ್ನು ಶಾರೂಕ್ಗೆ ಕೇಳಿಸುತ್ತಿದ್ದರು. ಪೌರಾಣಿಕ ಕಥೆಗಳ ಪ್ರಸಂಗ ಹೇಳಿದ್ದರು. ಹೀಗೆ ಗಜಲ್-ಕತೆಗಳೊಂದಿಗೇ ಬೆಳೆದ ಶಾರೂಕ್ಗೆ ಪದ್ಯ ಬರೆಯುವ ಹುಚ್ಚು ಅಂಟಿಕೊಂಡಿತು. ದಿಲ್ಲಿಯಲ್ಲಿ ಶಾರೂಕ್ನ ಮನೆಯ ಹಿಂದೆಯೇ ರಾಮಲೀಲಾ ಉತ್ಸವವೂ ನಡೆಯುತ್ತಿತ್ತು. ಬಾಲಕ ಶಾರೂಕ್ ದಿನವೂ ಉತ್ಸವಕ್ಕೆ ಹೋಗುತ್ತಿದ್ದ. ಅದೊಮ್ಮೆ ಅಲ್ಲಿನ ಕಾರ್ಯಕ್ರಮ ಆಯೋಜಕರೊಂದಿಗೆ ತನ್ನ ಪದ್ಯಗಳ ಬಗ್ಗೆ ಹೇಳಿಕೊಂಡ.
ರಾಮಲೀಲಾ ಉತ್ಸವದಲ್ಲಿ ಒಬ್ಬ ಮುಸ್ಲಿಂ ಹುಡುಗನಿಂದ ಶಾಯರಿಯಂಥ ಪದ್ಯಗಳನ್ನು ಓದಿಸಿದರೆ ಹೇಗೆ ಎಂಬ ಐಡಿಯಾ ಬಂತು ಪ್ರಾಯೋಜಕರಿಗೆ. ಅವರು ತಡಮಾಡಲಿಲ್ಲ. ಕಾರ್ಯಕ್ರಮದ ಮಧ್ಯೆ ಮೂರ್ನಾಲ್ಕು ನಿಮಿಷದ ಬ್ರೇಕ್ ಸಿಕ್ಕಾಗ - ‘ಈಗ ಲಘು ಮನರಂಜನೆ. ನಮ್ಮ ಹುಡುಗ ಶಾರೂಕ್ ಖಾನ್ನಿಂದ ಕವನ ವಾಚನ’ ಎಂದು ಪ್ರಕಟಿಸಿಯೇಬಿಟ್ಟರು.
ರಾಮಲೀಲಾ ಉತ್ಸವದಲ್ಲಿ ಸಾಬರ ಹುಡುಗ ಪದ್ಯ ಓದುತ್ತಾನೆ ಎಂಬುದೇ ಅವತ್ತಿನ ಮಟ್ಟಿಗೆ ವಿಶೇಷ ಸಂಗತಿ. ಜನ ಇವನನ್ನು ಚಪ್ಪಾಳೆ ಹೊಡೆದು ಸ್ವಾಗತಿಸಿದರು. ಶಾರೂಕ್ ಮೈಮರೆತು ಪದ್ಯ ಓದಿದ. ಕೇಳಿದ ಜನ ‘ವಾಹ್’ ಎಂದರು. ವಂಡರ್ ಅಂದರು. ನಂತರ ಸಭೆಯಲ್ಲಿದ್ದ ಇನ್ನೊಬ್ಬರ್ಯಾರೋ ‘ಭಕ್ಷೀಸ್’ ಎಂದು ೫೦೦ ರೂ.ಗಳನ್ನೇ ಕೊಟ್ಟುಬಿಟ್ಟರು. ಕೈಗೆ ಕಾಸು ಬಂದಾಗ ಶಾರೂಕ್ ಖುಷಿಯಿಂದ ಕುಣಿದಾಡಿದ. ಮರುದಿನ ಮತ್ತೊಂದು ಹೊಸ ಪದ್ಯದೊಂದಿಗೆ ಬಂದ. ಅವತ್ತೂ ಬಹುಮಾನ ಪಡೆದ. ಹೀಗೇ, ಒಂದು ತಿಂಗಳ ಕಾಲ ನಡೆಯಿತು!
***
‘ರಾಮನವಮಿ’ ಅಂದಾಗ ನಿಮಗೆ ಏನನ್ನಿಸ್ತದೆ ಎಂದು ಮೊನ್ನೆ ಪತ್ರಕರ್ತರೊಬ್ಬರು ಕೇಳಿದಾಗ ಶಾರೂಕ್ ನಾಸ್ಟಲ್ಜಿಯಾಕ್ಕೆ ಹೋಗಿ ಕೊಟ್ಟ ಉತ್ತರ ಇದು.
ನಿಮಗೆ ಯಾಕೋ ಹೇಳಬೇಕು ಅನ್ನಿಸ್ತು.
-ಮಣೀ

ಆ ಅಪರಾತ್ರಿಯಲ್ಲೂ ಹಾಲು ತಂದರು!

April 22, 2008

karanth

ಸಿಟ್ಟು, ಸಿಡಿಮಿಡಿ, ನಿಷ್ಠುರ ಮಾತು ಅಂದಾಕ್ಷಣ ನೆನಪಾಗುವವರು ಶಿವಾಮ ಕಾರಂತ. ಸೆಂಟಿಮೆಂಟ್ ಎಂಬ ಪದಕ್ಕೂ ಕಾರಂತರಿಗೂ ಪರಿಚಯವೇ ಇರಲಿಲ್ಲ ಎಂದು ನಂಬಿದ ಬಹಳ ಮಂದಿ ಹಿಂದೆಯೂ ಇದ್ದರು. ಈಗಲೂ ಇದ್ದಾರೆ. ಆದರೆ, ನಿಜ ಹೇಳಬೇಕೆಂದರೆ, ಕಾರಂತರ ಮನಸ್ಸಿನಲ್ಲಿ, ಮಾತಿನಲ್ಲಿ, ನಡವಳಿಕೆಯಲ್ಲಿ ಅಮ್ಮನ ಮಮತೆ ಯಾವಾಗಲೂ ಇದ್ದೇ ಇರುತ್ತಿತ್ತು. ಅದಕ್ಕೆ ಒಂದು ಉದಾಹರಣೆ ಇಲ್ಲಿದೆ:
ಅದೊಂದು ಸಂದರ್ಭದಲ್ಲಿ ವಿಮರ್ಶಕ ಎಲ್.ಎಸ್. ಶೇಷಗಿರಿರಾವ್ ದಂಪತಿಗಳು ಶಿವರಾಮ ಕಾರಂತರಿದ್ದ ಪುತ್ತೂರಿಗೆ ಹೋದರು. ಒಂದು ರಾತ್ರಿ ಅಲ್ಲಿಯೇ ಉಳಿದುಕೊಂಡರು. ರಾತ್ರಿ ಎರಡು ಗಂಟೆಯ ಹೊತ್ತಿನಲ್ಲಿ ಶೇಷಗಿರಿರಾಯರ ಮಗು ಎದ್ದು ಒಂದೇ ಸಮನೆ ಅಳಲಾರಂಭಿಸಿತು. ಹೇಳಿ ಕೇಳಿ ಹೊಸ ಊರು. ಅದೂ ಏನು? ದೂರ್ವಾಸರಂಥ ಸಿಟ್ಟಿನ ಶಿವರಾಮ ಕಾರಂತರ ಮನೆ. ಅಲ್ಲಿ ಮಧ್ಯ ರಾತ್ರಿಯಲ್ಲಿ ಮಗು ಅಳಲು ಶುರು ಮಾಡಿದರೆ ಹೇಗಾಗಬೇಡ? ಮಗು ಹಾಲಿಗಾಗಿ ಅಳುತ್ತಿದೆ ಎಂದು ಶೇಷಗಿರಿರಾವ್ ದಂಪತಿಗೆ ಅರ್ಥವಾಗಿ ಹೋಯಿತು. ಆದರೆ ಅಪರಾತ್ರಿಯಲ್ಲಿ, ಅಪರಿಚಿತ ಊರಿನಲ್ಲಿ ಹಾಲು ತರುವುದು ಎಲ್ಲಿಂದ? ರಾವ್ ದಂಪತಿಗಳು ಈ ಚಿಂತೆಯಲ್ಲಿದ್ದಾಗಲೇ ಶಿವರಾಮ ಕಾರಂತರಿಗೂ ಎಚ್ಚರವಾಯಿತು. ಅವರು ಪಕ್ಕದಲ್ಲಿದ್ದ ತಮ್ಮ ಮನೆಯಿಂದ ಬಂದು ಕೇಳಿದರು: ‘ಮಗು ತುಂಬಾ ಅಳ್ತಾ ಇದೆಯಲ್ಲ…?’
‘ಹೌದು ಸರ್. ಹಾಲಿಗಾಗಿ ಅಳ್ತಾ ಇದೆ. ಈಗ ತಟ್ಟಿ ಮಲಗಿಸಿಬಿಡ್ತೀವಿ ಸರ್’ ರಾವ್ ದಂಪತಿ ಒಂದು ಸಂಕೋಚದಿಂದಲೇ ಹೇಳಿದರು. ‘ಸರಿ’ ಎಂದ ಕಾರಂತರು ಅಲ್ಲಿಂದ ಮಾಯವಾದರು. ಆನಂತರ ಕೂಡ ಅದೇನೇ ಸರ್ಕಸ್ ಮಾಡಿದರೂ ಮಗುವಿನ ಅಳು ನಿಲ್ಲಲಿಲ್ಲ. ಕಡೆಗೆ ರೋಸಿ ಹೋದ ಶೇಷಗಿರಿರಾಯರು ಎಲ್ಲ ತಾಯ್ತಂದೆಗಳೂ ಮಾಡುವಂತೆ ಮಗುವಿಗೆ ಒಂದೇಟು ಹಾಕಿ ಅದರ ಬಾಯಿ ಮುಚ್ಚಿಸಲು ನೋಡಿದರು.
ಅದೇ ವೇಳೆಗೆ ಹಾಲಿನ ಬಾಟಲಿಯೊಂದಿಗೇ ಅಲ್ಲಿಗೆ ಬಂದ ಶಿವರಾಮ ಕಾರಂತರು- ‘ಅಲ್ರೀ ಶೇಷಗಿರಿರಾವ್, ಮಗೂಗೆ ಯಾಕೆ ಹೊಡೀತೀರಿ? ಅದಕ್ಕೆ ಹಸಿವಾಗಿದೆ. ಮೊದಲು ಹಾಲು ಕುಡಿಸಿ, ತಗೊಳ್ಳಿ’ ಅಂದರು!
ಹೌದು. ಅಳುತ್ತಿರುವ ಮಗುವನ್ನು ಸಂತೈಸಲು ಕಾರಂತರು ಆ ಅಪರಾತ್ರಿಯಲ್ಲಿ ಹೋಗಿ ಹಾಲು ತಂದಿದ್ದರು! ಶಿವರಾಮ ಕಾರಂತರದ್ದು ಅಮ್ಮನ ಮನಸ್ಸು ಎಂಬುದಕ್ಕೆ ಇನ್ಯಾವ ಸಾಕ್ಷಿ ಬೇಕು?

ಭಾವಿ ಶಾಸಕರಿಗೊಂದು ಬಹಿರಂಗ ಪತ್ರವು….!

April 22, 2008

ಶಾಸಕರಾಗುವ ಕನಸಿನಲ್ಲಿರುವ ಎಲ್ಲ ನಾಯಕರುಗಳಿಗೆ-ನಮಸ್ಕಾರ.
ಮಹನೀಯರೆ, ಚುನಾವಣೆ ನಡೆವ ದಿನ ಹತ್ತಿರಾಗುತ್ತಿದೆ. ಎಲ್ಲ ಪಕ್ಷಗಳೂ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ/ನೀಡುತ್ತಿವೆ. ಈ ಸಂದರ್ಭದಲ್ಲಿಯೇ ಮತದಾರನ ಮುಂದೆ ಬಂದು ನಿಲ್ಲಲು ನೀವು ತಯಾರಾಗಿದ್ದೀರಿ. ಈಗಾಗಲೇ ಪ್ರಯಾಣ ಶುರು ಮಾಡಿದ್ದೀರಿ. ಯಾವ ಊರಿಗೆ ಯಾವತ್ತು, ಎಷ್ಟು ಹೊತ್ತಿಗೆ ಹೋಗಬೇಕು? ಅಲ್ಲಿ ಮೊದಲಿಗೆ ಯಾರೊಂದಿಗೆ ಮಾತಾಡಬೇಕು? ಯಾರ ಮನೇಲಿ ತಿಂಡಿ ತಿನ್ನಬೇಕು? ಯಾರ ಕಾಲಿಗೆ ಡೈವ್ ಹೊಡೆಯಬೇಕು? ಯಾರ ಮುಂದೆ ಕಂಬನಿ ಸುರಿಸಬೇಕು? ಯಾವ ಏಜೆಂಟನನ್ನು ‘ಸರಿ’ ಮಾಡಿಕೊಳ್ಳಬೇಕು? ಯಾರ್ಯಾರ ಮೇಲೆ ಕಣ್ಣಿಡಬೇಕು ಎಂದೆಲ್ಲಾ ಆಗಲೇ ಡಿಸೈಡ್ ಮಾಡಿಬಿಟ್ಟಿದೀರ. ಹೊಸ ಖಾದಿ ಡ್ರೆಸ್ಸಲ್ಲಿ ನೀವು ಮನೆ ಮನೆಗೆ ಬರುವ ಸಂದರ್ಭದಲ್ಲೇ ಎಲ್ಲ ಮತದಾರರ ಪರವಾಗಿ ನಿಮಗೊಂದು ಪತ್ರವಿದೆ. ಓದಿಕೊಳ್ಳಿ…
****
ಕೇಳಿ ಸ್ವಾಮಿ, ಈಗ್ಗೆ ಇಪ್ಪತ್ತು ವರ್ಷದ ಹಿಂದೆ ‘ಶಾಸಕರು’ ಅಂದರೆ ನಮಗೆ ಒಂದು ಅಂದಾಜಿತ್ತು. ಏನೆಂದರೆ-‘ಆತ ನಮ್ಮವನು. ನಾವೇ ಆರಿಸಿ ಕಳಿಸಿದಂಥವನು. ನಮ್ಮ ಕಷ್ಟ-ಸುಖ ವಿಚಾರಿಸುವುದು ಅವನ ಕೆಲಸ ಮತ್ತು ಕರ್ತವ್ಯ…’ ಇತ್ಯಾದಿ, ಇತ್ಯಾದಿ. ನಮ್ಮ ಪುಣ್ಯಕ್ಕೆ ಆಗ ಶಾಸಕರೂ ಹಾಗೇ ಇದ್ದರು. ಅವರಿಗೆ ಪಕ್ಷವಿತ್ತು. ಸಿದ್ಧಾಂತವಿತ್ತು. ಕ್ಷೇತ್ರದ ಜನರ ಬಗ್ಗೆ ಪ್ರೀತಿಯಿತ್ತು. ಆರಿಸಿ ಕಳಿಸಿದವರನ್ನು ಯಾವತ್ತೂ ಅಳಿಸಬಾರದು ಎಂಬ ಅವಿವೇಕವಿತ್ತು. ಒಂದಿಷ್ಟು ಪ್ರಾಮಾಣಿಕತೆಯಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ, ಕ್ಷೇತ್ರವನ್ನು ಕಡೆಗಣಿಸಿದರೆ, ಜನ ಸಿಟ್ಟಾಗ್ತಾರೆ. ಸರಿಯಾಗಿ ಉಗೀತಾರೆ. ಮುಂದಿನ ಚುನಾವಣೇಲಿ ಸೀದಾ ಮನೆಗೆ ಕಳಿಸ್ತಾರೆ ಎಂಬ ಹೆದರಿಕೆಯಿತ್ತು. ಈ ಕಾರಣದಿಂದಲೇ ಆಗೆಲ್ಲ ಶಾಸಕ ಅನ್ನಿಸಿಕೊಂಡಾತ ‘ಅಣ್ಣೋ’ ಅಂದರೆ ಸಾಕು, ಕೈಗೆ ಸಿಗುತ್ತಿದ್ದ. ಕಷ್ಟಕ್ಕೆ ಕರಗುತ್ತಿದ್ದ. ‘ಹೆದರಬೇಡ ಕಣಪ್ಪಾ. ಜತೆಗೆ ನಾನಿರ್ತೀನಿ’ ಎಂದು ಸಾಂತ್ವನದ ಮಾತಾಡುತ್ತಿದ್ದ. ಹಾಗಂತ ಅವನೇನು ಧರ್ಮರಾಯನ ತಮ್ಮ ಆಗಿರಲಿಲ್ಲ. ಆದರೂ ಒಂದಿಷ್ಟು ಒಳ್ಳೆಯವನಿದ್ದ.
ಆದರೆ ಈಗಿನ ಪರಿಸ್ಥಿತಿ ಅದಕ್ಕೆ ಉಲ್ಟಾ ಆಗಿದೆ! ಈಗಾಗಲೇ ಶಾಸಕರಾಗಿ ಮೆರೆದಿರುವವರು ಹಾಗೂ ಶಾಸಕರಾಗಲು ರೆಡಿ ಇರುವವರ ಪೈಕಿ ಶೇಕಡ ತೊಂಬತ್ತೈದು ಮಂದಿಗೆ ಪಕ್ಷ-ಸಿದ್ಧಾಂತದಲ್ಲಿ ನಂಬಿಕೆಯಿಲ್ಲ. ಶಿಸ್ತು ಮೊದಲೇ ಇಲ್ಲ. ಕ್ಷೇತ್ರದ ಬಗ್ಗೆ ಕಾಳಜಿ ಹಾಗೂ ಮತದಾರನ ಬಗ್ಗೆ ಒಂದು ಸಣ್ಣ ಹೆದರಿಕೆ-ದೇವರಾಣೆಗೂ ಇಲ್ಲ. ಬದಲಿಗೆ, ಆಡಬಾರದ ನಾಟಕ ಆಡಿ, ಕಣ್ಣೀರು ಸುರಿಸಿ, ದುಡ್ಡು ಕೊಟ್ಟು, ಸೀರೆ ಹಂಚಿ, ಕಡೆಗೆ ಬೆದರಿಸಿ ವೋಟು ಪಡೆಯುವ ಕಲೆ ಎಲ್ಲರಿಗೂ ಕರಗತ ಆಗಿಬಿಟ್ಟಿದೆ. ಜತೆಗೆ ವೋಟು ಪಡೆಯಲೆಂದೇ ಒಂದೂರಿನ ಜನರನ್ನು ಇಬ್ಭಾಗ ಮಾಡುವ ಗುಣ ನಿಮಗೆ ಮೈಗೂಡಿ ಹೋಗಿದೆ.
ಪರಿಣಾಮ ಏನಾಗಿದೆ ಅಂದರೆ- ಶಾಸಕರೆಲ್ಲ ಶೋಷಕರು. ಎಲ್ಲ ಒಂದೇ ಜಾತಿಗೆ ಸೇರಿದವರು. ಅವರೆಲ್ಲ ಊಸರವಳ್ಳಿಯ ಥರದವರು. ಲಜ್ಜೆಗೆಟ್ಟವರು. ಅವರ ಸಹವಾಸವೇ ಬೇಡ. ಏನಾದ್ರೂ ಆಗಿ ಹಾಳಾಗ್ಲಿ. ಸುಮ್ನೆ ಹೋಗಿ ವೋಟ್ ಹಾಕಿ ಬರೋಣ ಎನ್ನುತ್ತಿದ್ದಾನೆ ಮತದಾರ. ಹಾಗೆಯೇ ಮಾಡ್ತಾ ಇದಾನೆ ಕೂಡಾ. ಅದಕ್ಕೆ ಸರಿಯಾಗಿ, ಚುನಾವಣೇಲಿ ಗೆದ್ದ ತಕ್ಷಣವೇ ನೀವು ಕ್ಷೇತ್ರವನ್ನು, ಅಲ್ಲಿನ ಮತದಾರರನ್ನು, ಅವರ ಸಮಸ್ಯೆಗಳನ್ನು ಮರೆತುಬಿಡ್ತಾ ಇದೀರ. ಕ್ಷೇತ್ರದ ಮನೆ ಹಾಳಾಗಲಿ, ಅಲ್ಲಿನ ಉದ್ಧಾರ ಕಟ್ಕೊಂಡು ನಮಗೆ ಆಗಬೇಕಾದ್ದೇನು ಅಂದ್ಕೊಂಡು ಬೆಂಗ್ಳೂರಲ್ಲಿ ಆರಾಮಾಗಿ ಉಳೀತೀರಿ. ಬಂಗಲೆ ಕಟ್ಟಿಸ್ತೀರಿ. ಸೈಟ್ ತಗೋತೀರಿ. ಬೇನಾಮಿ ಹೆಸರಲ್ಲಿ ಆಸ್ತಿ ಮಾಡ್ತೀರಿ. ಒಂದೆರಡಲ್ಲ, ಹತ್ತತ್ತು ಕಾರು ಇಟ್ಕೋತೀರಿ. ಇಷ್ಟೆಲ್ಲ ಆದ ನಂತರವೂ ಯಾವುದಾದ್ರೂ ವೇದಿಕೇಲಿ ಮಾತಾಡಲು ಛಾನ್ಸು ಸಿಕ್ಕರೆ- ‘ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ನನ್ನ ಗುರಿ’ ಎಂದು ಘೋಷಿಸ್ತೀರಿ! ಮತ ಕೇಳೋಕೆ ಬರ್ತಾ ಇರೋ ಮಹನೀಯರೆ, ನಿಮ್ಮ ಮನಸ್ಸೊಳಗೆ ಇರೋದು ಇಂಥವೇ ಆಲೋಚನೆಗಳು. ನಾಳೆ ನೀವು ಎಮ್ಮೆಲ್ಲೆ ಆಗಿ ವಿಧಾನಸೌಧಕ್ಕೆ ಹೋದ್ರೆ ಮಾಡೋದೇ ಹೀಗೆ. ಒಪ್ತೀರಾ ಅಲ್ವಾ?
ಇಂಥ ಸಂದರ್ಭದಲ್ಲೇ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹೇಳಬೇಕು ಅನ್ನಿಸ್ತಿದೆ. ಹೌದು, ಇವತ್ತಿಗೂ ಅದೆಷ್ಟೋ ಸಾವಿರ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಿದೆ. ಕರೆಂಟು ದಿನಕ್ಕೆ ಹತ್ತು ಬಾರಿ ಕೈಕೊಡ್ತಿದೆ. ರಸ್ತೆ ಎಂಬುದು ಇಲ್ವೇ ಇಲ್ಲ. ರಸ್ತೆಯೇ ಇಲ್ಲ ಅಂದ್ಮೇಲೆ ಬಸ್ಸಿನ ಮಾತೆಲ್ಲಿ? ಕೆಲವು ಕಡೆ ಆಸ್ಪತ್ರೆಗಳಿವೆ ನಿಜ. ಆದರೆ ಅಲ್ಲಿ ಡಾಕ್ಟ್ರಿಗೇ ಕಾಯಿಲೆ. ಶೌಚಾಲಯದ ಸಮಸ್ಯೆ ಬಿಡಿ, ಬಹುಶಃ ಮಂದಿನ ಹತ್ತು ವರ್ಷದ ನಂತರ ಕೂಡಾ ನಮ್ಮ ಹಳ್ಳಿಯ ಜನ ನಾಚಿಕೆಯಿಂದ ಗದ್ದೆಯ ಕಡೆ ಹೋಗುವ ದೃಶ್ಯ ಜೀವಂತ ಇದ್ದೇ ಇರುತ್ತೆ ಅನಿಸುತ್ತೆ. ಇದೆಲ್ಲ ಗೊತ್ತಿದ್ರೂ ನೀವು, ನಿಮ್ಮನ್ನು ಆಯ್ಕೆ ಮಾಡುವ ಪಕ್ಷಗಳು- ‘ನಾವು ಸೈಕಲ್ ಕೊಡ್ತೀವಿ. ಕಲರ್ ಟಿ.ವಿ. ಕೊಡ್ತೀವಿ. ಅಕ್ಕಿ ಕೊಡ್ತೀವಿ’ ಎಂದು ಘೋಷಿಸಿದಾಗ ನಗು ಬರುತ್ತೆ.
ಸುಮ್ನೇ ಯೋಚಿಸಿ ನೋಡಿ: ‘ಮನೇಲಿ ಕರೆಂಟೇ ಇರಲ್ಲ. ಹಾಗಿರೋವಾಗ ಕಲರ್ ಟಿ.ವಿ. ತಗೊಂಡು ಉಪ್ಪು-ಕಾರ ಹಾಕ್ಕಂಡು ನೆಕ್ಕೋಕಾಗ್ತದಾ? ಊರಿಗೆ ರಸ್ತೇನೇ ಇರಲ್ಲ, ಅಲ್ಲಿ ಸೈಕಲ್ ಹೊಡೆಯೋಕಾಗ್ತದಾ? ಕುಡಿಯೋಕೇ ನೀರಿಲ್ಲ ಅಂದ ಮೇಲೆ ನಿಮ್ಮ ಅಕ್ಕಿ ತಿಂದು ಬದುಕೋಕಾಗ್ತದಾ? ಇಲ್ಲ ತಾನೆ? ಪರಿಸ್ಥಿತಿ ಹೀಗಿರೋವಾಗ ನೀವು ಕೊಡುವ ಆಶ್ವಾಸನೆಗಳಿಗೆ ಏನಾದ್ರೂ ಅರ್ಥ ಇದೆಯಾ ಸ್ವಾಮೀ…?
ಹೌದಲ್ವ? ನೀವೇನು ಆಕಾಶದಿಂದ ಇಳಿದು ಬಂದವರಲ್ಲ. ನೀವೂ ಹಳ್ಳಿಯವರೇ. ರೈತರ ಮನೆಯ ಮಕ್ಕಳೇ. ಎಲ್ಲ ಸಮಸ್ಯೆಯನ್ನೂ ಹತ್ತಿರದಿಂದ ಕಂಡಿರುವವರೇ. ಹಾಗಿದ್ದೂ ಅದೇನೂ ಗೊತ್ತೇ ಇಲ್ಲ ಅನ್ನೋಥರ ನಡ್ಕೊಳ್ಳೋದು ಕಲಿತುಬಿಟ್ಟಿದ್ದೀರಿ. ಹಣಬಲದಿಂದ ಏನ್ ಬೇಕಾದ್ರೂ ಮಾಡಬಹುದು ಅಂತ ಮೆರೀತಾ ಇದೀರಿ. ಮತದಾರರ ಕಿವಿ ಮೇಲೆ ಹೂವಿಡೋದು ಸುಲಭ ಅಂತ ತಿಳ್ದಿದೀರಿ. ಅದೇ ಕಾರಣದಿಂದ ನೆನಪು ಮಾಡಿಕೊಡ್ತಾ ಇದೀನಿ. ಕೇಳಿ: ಈ ಕಡೆ ಬೆಂಗ್ಳೂರು ಸುತ್ತಮುತ್ತ ರೈತನ ಜಮೀನು ರಿಯಲ್ ಎಸ್ಟೇಟಿನ ಪಾಲಾಗಿದೆ. ಮಂಡ್ಯದ ರೈತನ ಕಬ್ಬಿಗೆ ಬೆಂಬಲ ಬೆಲೆ ಕುಸಿದಿದೆ. ಅಡಿಕೆಗೆ ರೇಟು ಬಿದ್ದು ಹೋಗಿ ಮಲೆನಾಡ ರೈತನ ಕನಸು ಮಣ್ಣು ಪಾಲಾಗಿದೆ. ಬಿಜಾಪುರದ ಬಡವ ದ್ರಾಕ್ಷಿ ಬೆಳೆದೂ ಕಹಿ ಅನುಭವಿಸಿದ್ದಾನೆ. ತೊಗರಿ ಬೆಳೆದವರ ಬದುಕು ತೂಫಾನಿಗೇ ಸಿಕ್ಕಿಕೊಂಡಿದೆ. ಗಂಟಲಲ್ಲೇ ಸಿಕ್ಕಿಕೊಂಡ ಮುಸುಕಿನ ಜೋಳ ಹುಬ್ಬಳ್ಳಿ ರೈತನ ಜೀವ ತೆಗೆಯುತ್ತಿದೆ. ಹೀಗಿರುವಾಗ ಅವರೆಲ್ಲ ಒಂದು ಆಸರೆಗಾಗಿ, ಒಂದು ಸಾಂತ್ವನದ ಮಾತಿಗಾಗಿ, ತಮ್ಮ ಕಂಬನಿ ಒರೆಸುವ ಕೈಗಾಗಿ ಕಾದು ನಿಂತಿದ್ದಾರೆ.
****
ಹೌದು ಸಾರ್. ಇಂಥ ಸಂದರ್ಭದಲ್ಲೇ ಚುನಾವಣೆ ಎದುರಾಗಿದೆ. ನೀವು-‘ವೋಟು ಕೊಡೀಪ್ಪಾ. ನೀವೇ ನಮ್ಮ ಪಾಲಿನ ದೇವರೂ. ನೀವು ಕೈಬಿಟ್ರೆ ನಾವು ಬದುಕೋದು ಹೇಗೆ? ಈ ಸರ್ತಿ ನನ್ನನ್ನು ಗೆಲ್ಲಿಸಿದ್ರೆ ಸಾಕು, ಇಂದ್ರನ ದೇವಲೋಕವನ್ನೇ ತಂದು ನಿಮ್ಮೆದುರು ಇಡ್ತೀನಿ’ ಎಂದೆಲ್ಲ ಬಡಾಯಿ ಕೊಚ್ಚಿಕೊಳ್ತಾ ಇದೀರ. ದುಡ್ಡಿನ ಆಸೆ ತೋರಿಸ್ತಾ ಇದೀರ. ಹಿಂಬಾಲಕರ ಕಡೆಯಿಂದ ಸೀರೆ- ಶರಾಬು ಕಳಿಸ್ತಾ ಇದೀರ.
ಒಂದು ಮಾತು ಹೇಳಲಾ ಸ್ವಾಮೀ, ಭಾರತದ ಕೋಟ್ಯಾನುಕೋಟಿ ಮತದಾರರು ಇವತ್ತಿಗೂ ಬಡವರಷ್ಟೇ ಅಲ್ಲ, ಕಡುಬಡವರು ಎಂಬುದು ನಿಜ. ಆದರೆ ಅವರೆಲ್ಲ ನಿಮ್ಮ ದುಡ್ಡನ್ನೇ, ನೀವು ಕೊಡುವ ತುಂಡು ಬಟ್ಟೆಯನ್ನೇ ನಂಬಿಕೊಂಡು ಕುಳಿತಿಲ್ಲ. ಅವರ ಬದುಕು ಅಷ್ಟರಮಟ್ಟಿಗೆ ಹೇಗೋ ನಡೀತಾ ಇದೆ. ನಿಜಕ್ಕೂ ಈಗ ಮತ್ತು ಮುಂದೆ ನೀವು ಮಾಡಬೇಕಿರೋದು ಏನು ಗೊತ್ತ? ಹಳ್ಳಿಗಳಿಗೆ ವಿದ್ಯುತ್ ಕೊಡಿಸಿ. ನೀರಿನ ವ್ಯವಸ್ಥೆ ಕಲ್ಪಿಸಿ. ಗಬ್ಬೆದ್ದು ನಾರುತ್ತಿರುವ ಒಳಚರಂಡಿಗಳನ್ನ ಕ್ಲೀನ್ ಮಾಡಿಸುವ ಮಾತಾಡಿ. ಎಸ್ಸೆಸ್ಸೆಲ್ಸಿ/ಪಿಯೂಸಿಯ ನಂತರ ಮುಂದೆ ಓದೋಕಾಗದೆ ಹಳ್ಳೀಲೇ ಉಳಿದುಬಿಟ್ಟಿದಾರಲ್ಲ, ಅಂಥವರಿಗೆ ಅಂತಾನೇ ಕ್ಷೇತ್ರದಲ್ಲಿ ಒಂದು ಫ್ಯಾಕ್ಟರಿ ಶುರು ಮಾಡಲು ಮುಂದಾಗಿ. ಚುನಾವಣೇಲಿ ಮಾಡುವ ದುಂದುವೆಚ್ಚದ ಬದಲು, ಅದೇ ದುಡ್ಡನ್ನು ಬಡವರ ಬದುಕು ನೇರ್ಪುಗೊಳಿಸಲು ಬಳಸಿ. ಸೋತರೂ ಪರವಾಗಿಲ್ಲ ಕ್ಷೇತ್ರದ ಜನರನ್ನು ಮರೆಯಲಾರೆ ಅಂತ ಶಪಥ ಮಾಡಿ. ರೈತನ ಕೈ ಹಿಡಿಯಿರಿ. ಕಷ್ಟ ಸುಖ ವಿಚಾರಿಸಿ. ಕಣ್ಣೀರು ಒರೆಸಿ. ‘ನಾನಿರೋವಾಗ ನೀನು ಹೆದರೋದೇನಪ್ಪ? ನಿಂಗೆ ತೊಂದರೆ ಆಗದಂತೆ ನೋಡ್ಕೋತೇನೆ ಹೆದರಬೇಡ’ ಎಂದು ಧೈರ್ಯ ಹೇಳಿ. ನಿರ್ಗತಿಕರಿಗೆ ಒಂದಿಷ್ಟು ಅನ್ನ, ಒಂದು ಸೂರು ಒದಗಿಸಲು ರವಷ್ಟಾದರೂ ಪ್ರಯತ್ನ ಮಾಡಿ.
ಅದು ಬಿಟ್ಟು, ಹಳ್ಳಿಯ ಜನರನ್ನೇ ಎರಡು ಗುಂಪು ಮಾಡೋದು, ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟೋದು, ಕ್ಷೇತ್ರವನ್ನೇ ಮರೆತು ಕಾಸು ಮಾಡಲು ನಿಂತುಬಿಡೋದು, ಊರ ಜನ ಹೊಡೆದಾಟಕ್ಕೆ ನಿಂತರೆ ತೆಪ್ಪಗೆ ಬೆಂಗ್ಳೂರು ಸೇರೋದು. ಬಡವರು ಸಾಯ್ತಾ ಇದ್ರೂ ಆ ಕಡೆ ತಿರುಗಿ ಕೂಡಾ ನೋಡ್ದೆ ಇರೋದು, ಯಾರಾದ್ರೂ ಕೇಳಿದ್ರೆ ‘ದಿನಾ ಸಾಯೋರಿಗೆ ಅಳೋರು ಯಾರ್ರೀ’ ಎಂದು ಉಡಾಫೆಯ ಮಾತಾಡುವುದು-ಛಿ, ಛಿ, ಅದೆಲ್ಲ ಸಣ್ಣತನ ಕಣ್ರೀ…
ಪ್ಲೀಸ್, ಅಂಥ ಕೆಲಸ ಮಾಡಬೇಡಿ. ಇಲ್ಲ, ನಾವು ಹಾಗೆ ಮಾಡೋದೇ ಸೈ ಅನ್ನುವಂತಿದ್ರೆ ವೋಟು ಕೇಳಲು ಬರಲೇಬೇಡಿ. ಮುಂದೆ ನೀವೆಲ್ಲಾ ಜನರನ್ನು ಪೋಷಿಸುವ ನಾಯಕರಾಗಬೇಕೇ ವಿನಃ ಶೋಷಿಸುವ ಶಾಸಕರಾಗಬಾರದು. ಹಂಗೇನಾರ ಮಾಡಿದ್ರೋ- ನೆನಪಿರಲಿ. ಕುದುರೆ ನಿಮ್ಮದಿರಬಹುದು. ಅದರ ಲಗಾಮು ನಮ್ಮ ಹತ್ರಾನೇ ಇರುತ್ತೆ. ನಮಗೆ ಮೇಲೆ ಹತ್ತಿಸಿ ಮೆರೆಸುವುದೂ ಗೊತ್ತು. ಕೆಳಗೆ ಬೀಳಿಸಿ ಮಣ್ಣು ಮುಕ್ಕಿಸುವುದೂ ಗೊತ್ತು. ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡಾದರೂ ನೀವೆಲ್ಲ ಜನಪರ ಕೆಲಸ ಮಾಡಲು ಮುಂದಾಗ್ತೀರಿ ಅನ್ನೋ ನಿರೀಕ್ಷೆಯೊಂದಿಗೆ ಪತ್ರ ಮುಗಿಸ್ತಿದೀನಿ. ನಮಸ್ಕಾರ.

ಸ್ಪೀಡಿಗೆ ಬ್ರೇಕು ಬೀಳಲಿ.

April 15, 2008

damar

ರಾಜಾಜಿನಗರ ಇಂಡಸ್ಟ್ರಿಯಲ್ ಏರಿಯಾದ ತನ್ನ ಫ್ಯಾಕ್ಟರಿಯಿಂದ ಹೊರಬಂದ ಜಗತ್ ಒಮ್ಮೆ ಗಡಿಯಾರ ನೋಡಿಕೊಂಡ. ಆಗಲೇ ಆರೂ ಇಪ್ಪತ್ತು! ಅಲ್ಲಿಂದ ಇಪ್ಪತ್ತೆಂಟು ಕಿಲೋಮೀಟರು ದೂರದ ಡಾಬಸ್ ಪೇಟೆಯ ಹೊಸಮನೆಗೆ ಹೋಗಲಿಕ್ಕೆ ಎಷ್ಟು ಹೊತ್ತು ಬೇಕು? ಜಗತ್ ನಿಂತಲ್ಲಿಯೇ ಒಮ್ಮೆ ಲೆಕ್ಕ ಹಾಕಿದ. ಡ್ರೈವಿಂಗ್ಗೆ ಕೂತರೆ ತನ್ನ ಮುಂದೆ ಗಾಳಿಯೂ ಲೆಕ್ಕಕ್ಕೆ ಬಾರದು. ಅಂದ ಮೇಲೆ ಏನೇ ಟ್ರಾಫಿಕ್ ಅಂದುಕೊಂಡರೂ ಬರೀ ಹದಿನೆಂಟೇ ನಿಮಿಷದಲ್ಲಿ ಮನೆ ತಲುಪಬಲ್ಲೆ ಅಂದುಕೊಂಡವನೇ ತಿಳಿ ನೀಲಿಯ ಸ್ಕೋಡಾ ಕಾರು ಹತ್ತಿ ಕೂತ.
ನಂತರದ ಎರಡೇ ನಿಮಿಷದಲ್ಲಿ ಅವನ ಕಾರು ಮೋದಿ ಆಸ್ಪತ್ರೆಯ ತಿರುವು ದಾಟಿಯಾಗಿತ್ತು. ಅಷ್ಟು ಹೊತ್ತಿಗೇ ಒಮ್ಮೆ ಸಿಗ್ನಲ್ ಜಂಪ್ ಮಾಡಿದ್ದ. ಒಬ್ಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿದ್ದ. ತನ್ನ ಮಿಂಚಿನ ವೇಗದ ಬಗ್ಗೆ ಅವನಿಗೆ ಹೆಮ್ಮೆಯಿತ್ತು. ಕಾರ್ ರೇಸ್ನ ಛಾಂಪಿಯನ್ ಶೂಮಾಕರ್ ಇದ್ದಾನಲ್ಲ, ಅವನೂ ಕೂಡ ಬೆರಗಾಗಬೇಕು ಅಂಥ ಸ್ಪೀಡು ಜಗತ್ನದ್ದು. ವೇಗವಾಗಿ ಹೋಗಬೇಕು ಎಂಬ ಆಸೆಯ ಜತೆಗೆ ಸಿರಿವಂತಿಕೆಯ ಅಹಂ ಕೂಡ ಸೇರಿಕೊಂಡಿತ್ತಲ್ಲ, ಅದೇ ಕಾರಣದಿಂದ ಅವನು ವಿಪರೀತ ಕೊಬ್ಬಿದ್ದ. ದಿನಾದಿನ ಒಂದಲ್ಲ ಒಂದು ಕಡೆ ಸಿಗ್ನಲ್ ಜಂಪ್ ಮಾಡುವುದು, ಬೈಕು, ಬಸ್ಗಳಿಗೆ ಡಿಕ್ಕಿ ಹೊಡೆಯುವುದು ಅವನ ಪಾಲಿಗೆ ಹವ್ಯಾಸವೇ ಆಗಿಹೋಗಿತ್ತು. ತುಂಬಾ ಸಂದರ್ಭಗಳಲ್ಲಿ ಫೈನ್ ಕಟ್ಟಿ ಬಂದು ಬಿಡುತ್ತಿದ್ದ. ಖಡಕ್ ಅಕಾರಿಗಳ ಕೈಗೆ ಸಿಕ್ಕಿಬಿದ್ದಾಗ ಮಾತ್ರ ತನ್ನ ಪ್ರಭಾವ ಬಳಸಿ ಹಿರಿಯ ಅಕಾರಿಗಳಿಂದ ಫೋನು ಮಾಡಿಸುತ್ತಿದ್ದ. ಹೇಳಿ ಕೇಳಿ ಲಕ್ಷಾಪತಿ. ಅಂಥವನಿಗೆ ಹಿರಿಯ ಅಕಾರಿಗಳನ್ನು ಓಲೈಸುವುದು ಅದ್ಯಾವ ಘನಂದಾರಿ ಕೆಲಸ?
ಜಗತ್ ಮತ್ತೊಮ್ಮೆ ಗಡಿಯಾರ ನೋಡಿಕೊಂಡ. ಸಮಯ ೬:೨೫! ಕೇವಲ ಐದೇ ನಿಮಿಷದಲ್ಲಿ ಅವನು ಇಸ್ಕಾನ್ ದಾಟಿ ಯಶವಂತಪುರವನ್ನೂ ಹಿಂದಿಕ್ಕಿ, ಪೀಣ್ಯ ತಲುಪಿಕೊಂಡಿದ್ದ. ಆ ಐದು ನಿಮಿಷದ ಅವಯಲ್ಲಿ ಓವರ್ ಟೇಕ್ ಮಾಡಿದ ವಾಹನಗಳೆಷ್ಟು? ತಾನು ಸ್ಪೀಡು ಹೆಚ್ಚಿಸುವ ರಭಸಕ್ಕೆ ಸ್ಪೀಡೋ ಮೀಟರಿನ ಮುಳ್ಳು ಸರ್ರಸರ್ರನೆ ಅತ್ತಿಂದಿತ್ತ ಸರಿದಾಡಿದ ಲೆಕ್ಕ ಎಷ್ಟು? ಹೀಗೊಮ್ಮೆ ಯೋಚಿಸಿದವನಿಗೆ ತನ್ನ ಬಗ್ಗೆ ವಿಪರೀತ ಹೆಮ್ಮೆಯೆನಿಸಿತು. ಅದೇ ಖುಷಿಯಲ್ಲಿ ಮತ್ತೆ ಆಕ್ಸರಲೇಟರ್ ತುಳಿದ. ನೋಡ ನೋಡುತ್ತಲೇ ಪಾರ್ಲೆ ಬಿಸ್ಕತ್ ಕಂಪನಿಯ ಫ್ಯಾಕ್ಟರಿ ಬಂದು ಹೋಯಿತು. ಇದೇ ವೇಗದಲ್ಲಿ ಹೋದರೆ, ಐದು ನಿಮಿಷದಲ್ಲಿ ನೆಲಮಂಗಲ, ನಂತರದ ಐದೇ ನಿಮಿಷದಲ್ಲಿ ಡಾಬಸ್ಪೇಟೆ! ಅಂದರೆ ಬರೀ ಹದಿನೈದು ನಿಮಿಷದ ಯಾತ್ರೆ! ಅದೂ ಜಾತ್ರೆಯಂಥ ರಸ್ತೆಯಲ್ಲಿ…
ಜಗತ್ ಹೀಗೆ ಯೋಚಿಸುತ್ತಲೇ ಡ್ರೈವ್ ಮಾಡುತ್ತಿದ್ದ. ರೆಪ್ಪೆ ಮಿಟುಕಿಸುವಷ್ಟರಲ್ಲಿ ನೆಲಮಂಗಲವೂ ಬಂದು ಹೋಯಿತು. ಆಗೊಮ್ಮೆ ಸೈಡ್ ಮಿರರ್ನಲ್ಲಿ ದೃಷ್ಟಿ ಹಾಯಿಸಿದವನಿಗೆ-ಪೊಲೀಸ್ ಜೀಪೊಂದು ತನ್ನನ್ನೇ ಹಿಂಬಾಲಿಸುತ್ತಿರುವುದು ಕಾಣಿಸಿತು. ಅದು ಹೇಗೆ ಹಿಡೀತಾನೋ ನೋಡೋಣ ಎಂದುಕೊಂಡೇ ಈತ ಆವೇಶದಿಂದ ವೇಗ ಹೆಚ್ಚಿಸಿದ. ಆದರೆ ಹಾಸನ-ತುಮಕೂರಿಗೆ ಸಂಪರ್ಕ ಕಲ್ಪಿಸುವ ಸರ್ಕಲ್ ಇದೆಯಲ್ಲ? ಅಲ್ಲಿ ಕಡೆಗೂ ಪೊಲೀಸ್ ಅಕಾರಿಯ ಜೀಪು ಜಗತ್ನ ಕಾರನ್ನು ಹಿಂದಿಕ್ಕಿತು.
***
‘ನಿಮ್ಮ ಲೈಸೆನ್ಸ್ ತೋರಿಸಿ’ ಎಂದ ಅಕಾರಿ. ಲೈಸೆನ್ಸ್ ಮಾತ್ರವಲ್ಲ, ಅದರ ಜತೆಗೆ ನೂರರ ಐದು ಗರಿಗರಿ ನೋಟುಗಳನ್ನೂ ಹಿಡಿದುಕೊಂಡೇ ಜಗತ್ ಸಿದ್ಧನಾಗಿ ನಿಂತಿದ್ದ. ಈ ಅಕಾರಿ ಇನ್ನೇನು ತಾನೆ ಮಾಡಿಯಾನು? ಅಬ್ಬಬ್ಬಾ ಅಂದರೆ ಐನೂರು ರೂ. ದಂಡ ಹಾಕಬಹುದು. ಅದಕ್ಕೂ ಹೆಚ್ಚು ಅಂದರೆ ಅದು ಸಾವಿರ ಆಗಬಹುದು. ದಿನಕ್ಕೆ ಲಕ್ಷ ದುಡಿವ ಫ್ಯಾಕ್ಟರಿಯ ಮಾಲೀಕನಾದ ತನಗೆ ಇದೆಲ್ಲ ಯಾವ ಲೆಕ್ಕ ಎಂಬ ಉಡಾಫೆ ಇವನದು. ಆದರೆ ಆ ಅಕಾರಿ ಲೈಸೆನ್ಸ್ ಪಡೆದವನೇ ಒಮ್ಮೆ ಅದನ್ನೇ ದಿಟ್ಟಿಸಿ ನೋಡಿದ. ನಂತರ ತನ್ನಲ್ಲಿದ್ದ ಪ್ಯಾಡ್ನಲ್ಲಿ ಗಂಭೀರವಾಗಿ ಏನನ್ನೋ ಬರೆದು, ನಿರ್ವಿಕಾರ ಭಾವದಿಂದಲೇ ಅದನ್ನು ಇವನ ಕೈಗಿಟ್ಟು ಹೋಗಿಬಿಟ್ಟ. ಆ ಪೊಲೀಸ್ ಅಕಾರಿಯ ವರ್ತನೆಯೇ ಜಗತ್ನನ್ನು ಅಚ್ಚರಿಯ ಮಡುವಿಗೆ ನೂಕಿತ್ತು. ಕುತೂಹಲದಿಂದಲೇ ಆ ಚೀಟಿಯನ್ನು ಓದಲು ಶುರುವಿಟ್ಟ. ಅಲ್ಲಿ ಹೀಗಿತ್ತು:
ಡಿಯರ್ ಜಗತ್, ಹತ್ತು ವರ್ಷಗಳ ಹಿಂದಿನ ಮಾತು. ನನಗೊಬ್ಬಳು ಮಗಳಿದ್ದಳು. ಅವಳಿಗೆ ಸುಂದ್ರೀ ಅನ್ನುತ್ತಿದ್ದೆ. ಹೌದು, ಆಕೆ ಹೆಸರಿಗೆ ತಕ್ಕಂತೆ ಸುಂದರಿಯೇ. ಮಗಳು ಬಂದ ಮೇಲೆ ನನ್ನ ಬದುಕು ಬದಲಾಯಿತು. ಅವಳ ಖುಷಿಯಲ್ಲೇ ನಾನು ದೇವರನ್ನು ನೋಡಿದೆ. ಅವಳ ನೆಮ್ಮದಿಯೇ ನನ್ನ ಬದುಕು ಅಂದುಕೊಂಡೆ. ಅವಳಿಲ್ಲದಿದ್ದರೆ ನಾನು ಬದುಕುವುದೇ ಇಲ್ಲ ಅಂದುಕೊಂಡಿದ್ದೆ. ಆದರೆ ನನ್ನ ಎಲ್ಲ ನಿರೀಕ್ಷೆಗಳಿಗೂ ವಿರುದ್ಧವಾಗಿ ಘಟನೆಯೊಂದು ಜರುಗಿಹೋಯಿತು. ಅದೊಂದು ದಿನ ಸ್ಕೂಲ್ನಿಂದ ಮನೆಗೆ ಬರುತ್ತಿದ್ದ ನನ್ನ ಮಗಳಿಗೆ ಅದೆಲ್ಲಿಂದಲೋ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆಯಿತು. ನನ್ನ ಬಂಗಾರದಂಥ ಮಗಳು ಸ್ಥಳದಲ್ಲೇ ಸತ್ತು ಹೋದಳು.
ಮುಂದೆ, ಎಲ್ಲ ಕಡೆ ಆಗುವಂತೆಯೇ ಆ ಕಾರಿನ ಚಾಲಕ ಕಂ ಮಾಲೀಕನಿಗೂ ಶಿಕ್ಷೆಯಾಯಿತು. ಆತ ನ್ಯಾಯಾಶರ ಮುಂದೆ ನಿಂತು ಬಿಕ್ಕಳಿಸುತ್ತಾ- ‘ಗೊತ್ತಿಲ್ದೆ ತಪ್ಪು ಮಾಡಿಬಿಟ್ಟೆ. ಕ್ಷಮಿಸಿಬಿಡಿ ಸ್ವಾಮೀ. ಮನೇಲಿ ಮೂರು ಹೆಣ್ಣು ಮಕ್ಕಳಿವೆ ಸ್ವಾಮೀ. ಅವರ ಮುಖ ನೋಡಿಯಾದರೂ ನನಗೆ ಕಡಿಮೆ ಶಿಕ್ಷೆ ಕೊಡಿ’ ಎಂದ.
ಅವನ ದುಃಖಕ್ಕೆ ನ್ಯಾಯಾಶರೂ ಕರಗಿದರು. ಒಂದಿಷ್ಟು ದಂಡ, ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಸಿದರು. ಆತ, ನೋಡ ನೋಡುತ್ತಿದ್ದಂತೆಯೇ ಜೈಲಿಂದ ಹೊರಬಂದ. ಮಕ್ಕಳನ್ನು ಮುದ್ದಾಡುವ ಬಯಕೆಯಿಂದ ಮನೆಗೆ ಓಡಿಹೋದ. ಆದರೆ ನನ್ನ ಕಥೆ?
ನನ್ನ ಮಗಳು ಎಂದೆಂದೂ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಳು. ಅವಳನ್ನು ತಬ್ಬಿ ಮುದ್ದಾಡಬೇಕೆಂದರೆ-ನಾನೂ ಅವಳಿದ್ದ ಲೋಕಕ್ಕೇ ಹೋಗಬೇಕಿತ್ತು. ಮಗಳ ಮೇಲಿನ ಮೋಹದಿಂದ - ‘ದೇವರೇ, ನಂಗೆ ಸಾವು ಕೊಡು ಎಂದು ಪದೇ ಪದೆ ಬೇಡಿಕೊಂಡೆ. ಉಹುಂ, ದೇವರು ನನ್ನ ಮೇಲೆ ಕರುಣೆ ತೋರಲಿಲ್ಲ. ಪರಿಣಾಮ, ಸಾಯುವವರೆಗೂ ಕಣ್ಣೀರಿನಲ್ಲೇ ನಾನು ಕೈತೊಳೆಯುವ ಹಾಗಾಗಿದೆ. ಆ ಮಗಳನ್ನು ಕಳೆದುಕೊಂಡ ನಂತರದಲ್ಲಿ ಆ ಕಾರ್ ಮಾಲೀಕನನ್ನು ಕ್ಷಮಿಸಲು ಸಾವಿರ ಸಲ ಯೋಚಿಸಿದ್ದೇನೆ. ಕ್ಷಮಿಸಿದ್ದೇನೆ ಕೂಡಾ…
ಆದರೆ, ನನ್ನ ಮಗಳು, ಅವಳ ಮುಗ್ಧತೆ, ಮುದ್ದು ಮಾತು, ವಿಪರೀತ ಎನ್ನುವಂಥ ಮಮಕಾರ ನೆನಪಾದಾಗಲೆಲ್ಲ ಕಣ್ಣೀರು ಉಕ್ಕಿ ಬರುತ್ತೆ. ಇವತ್ತು ನೀವು ಹುಚ್ಚು ವೇಗದಲ್ಲಿ ಕಾರ್ ಓಡಿಸಿಕೊಂಡು ಬಂದದ್ದು ನೋಡಿ, ಇದೆಲ್ಲ ನೆನಪಾಗಿಬಿಡ್ತು. ಬಡಿ ಜಗತ್, ನಿಮ್ಮಂಥ ಶ್ರೀಮಂತರಿಗೆ ದಂಡ, ಕಾನೂನು, ಶಿಕ್ಷೆಯದು ಯಾವ ಲೆಕ್ಕ? ಆದರೆ ನೆನಪಿರಲಿ, ನನ್ನ ಮಗಳಂಥ ಅದೆಷ್ಟೋ ಮುಗ್ಧ ಜೀವಗಳು ನಿಮ್ಮಂಥವರ ಕಾರ್ಗೆ ಸಿಕ್ಕಿಕೊಳ್ಳುತ್ತಾರೆ. ಜೀವ ಬಿಡುತ್ತಾರೆ. ಆಮೇಲಿನದ್ದನ್ನು ವಿವರಿಸುವುದೇ ಬೇಡ ಅಲ್ವ? ಇರಲಿ, ಆದಷ್ಟು ಬೇಗ ನನ್ನ ಮಗಳಿರುವ ಜಾಗಕ್ಕೆ ಹೋಗಿಬಿಡಬೇಕೆಂಬ ಮಹದಾಸೆ ನನ್ನದು. ಉಹುಂ, ನೀವು ದಂಡ ಕೊಡೋದು ಬೇಡ. ಬದಲಿಗೆ ಈ ಅಮಾಯಕ ಪೊಲೀಸನ ಆಸೆ ಈಡೇರಲಿ ಅಂತ ನನಗೋಸ್ಕರ ಪ್ರಾರ್ಥಿಸ್ತೀರಾ? ಪ್ಲೀಸ್, ಮುಂದಾದರೂ ನಿಧಾನವಾಗಿ ಕಾರು ಓಡಿಸಿ. ಯಾಕೆಂದರೆ ರಸ್ತೇಲಿ ಮಕ್ಕಳಿರ್ತವೆ…
ಇದಿಷ್ಟನ್ನೂ ಒದೇ ಉಸುರಿನಲ್ಲಿ ಓದಿಕೊಂಡ ಜಗತ್, ಜೀವನದಲ್ಲಿ ಅದೇ ಮೊದಲ ಬಾರಿಗೆ ಭಾವುಕನಾದ. ಏನೋ ಹೇಳೋಣವೆಂದು ಕತ್ತೆತ್ತಿದರೆ, ಅಲ್ಲಿ ಆ ಪೊಲೀಸ್ ಅಕಾರಿಯಿರಲಿಲ್ಲ. ಅವನು ಜೀಪು ನಿಧಾನವಾಗಿ ಪೀಣ್ಯದ ಹಾದಿಯಲ್ಲಿ ಸಾಗುತ್ತಿದ್ದುದು ಅಸ್ಪಷ್ಟವಾಗಿ ಕಾಣಿಸಿತು. ಯಾವುದೋ ಸನ್ನಿಗೆ ಒಳಗಾಗದವನಂತೆ ಈತ ಕಾರು ಹತ್ತಿದ. ನಿಧಾನ ಅಂದರೆ ನಿಧಾನವಾಗಿ ಡ್ರೈವ್ ಮಾಡಿಕೊಂಡು ಮನೆಗೆ ಬಂದ.
ಅಪ್ಪನನ್ನು ಕಂಡದ್ದೇ ತಡ ಮಕ್ಕಳು ಓಡಿಬಂದವು. ಕೊರಳಿಗೆ ಜೋತುಬಿದ್ದವು. ಇವನು ತಕ್ಷಣ ಕಣ್ಣೀರಾದ. ಮಕ್ಕಳಿಗೋ ಗಾಬರಿ. ತಕ್ಷಣ ಹೆಂಡತಿ ಬಂದಳು. ಇವನ ಸಪ್ಪೆ ಮುಖ ಕಂಡು ಆಕೆಗೂ ಅಚ್ಚರಿ. ಏನಾಯ್ತುರೀ? ವ್ಯವಹಾರದಲ್ಲಿ ಏನಾದ್ರೂ ಲಾಸ್ ಆಯ್ತಾ ಎಂದಳಾಕೆ. ಇವನು ಅಡ್ಡಡ್ಡ ಕತ್ತು ಒಗೆದ. ನಂತರ ಹೆಂಡತಿ-ಮಕ್ಕಳನ್ನು ಜತೆಗೆ ಕೂರಿಸಿಕೊಂಡು ನಡೆದ ಘಟನೆ ವಿವರಿಸಿದ. ನನ್ನಲ್ಲಿ ಎಷ್ಟು ದುಡ್ಡಿದ್ದರೆ ತಾನೆ ಏನು ಬಂತು? ಆ ಪೊಲೀಸನ ಕಂಬನಿ ಒರೆಸುವ ಶಕ್ತಿ ನನಗಿಲ್ಲವಲ್ಲ ಎಂದು ನಿಟ್ಟಿಸಿರುಬಿಟ್ಟ. ನಂತರ ಏನನ್ನೋ ನಿರ್ಧರಿಸಿದವನಂತೆ, ಇವತ್ತೇ ಕಡೆ. ಇನ್ಮೇಲೆ ಜೋರಾಗಿ ಕಾರು ಓಡಿಸಲ್ಲ. ಯಾರಿಗೂ ಡಿಕ್ಕಿ ಹೊಡೆಸಲ್ಲ ಎಂದು ಮಗಳ ಕೈ ಹಿಡಿದು ಪ್ರಾಮಿಸ್ ಮಾಡಿದ. ಹಿಂದೆಯೇ ಹೆಂಡತಿ-ಮಕ್ಕಳೊಂದಿಗೆ ಕೂತು ಆ ಕಣ್ಮರೆಯಾದ ಕಂದನ ಪರವಾಗಿ ಪ್ರಾರ್ಥಿಸಿದ!
***
ಫ್ರೆಂಡ್ಸ್, ಯೋಚಿಸಿ ನೋಡಿ, ನಾವು-ನೀವೆಲ್ಲ ಈ ಕಥಾನಾಯಕ ಜಗತ್ ಇದ್ದಾನಲ್ಲ, ಅವನ ಬಂಧುಗಳೇ. ಯಾವತ್ತೂ ಅಷ್ಟೆ, ನಮ್ಮದು ಹೆಚ್ಚು ವೇಗ ಮತ್ತು ಹುಚ್ಚು ವೇಗ. ‘ಅಪಘಾತಕ್ಕೆ ಅವಸರವೇ ಕಾರಣ’ ಎಂದು ಗೊತ್ತಿದ್ದರೂ ನಾವೆಲ್ಲ ರೊಯ್ಯರೊಯ್ಯರೊಯ್ಯನೆ ಗಾಡಿ ಓಡಿಸುತ್ತೇವೆ. ಸಿಗ್ನಲ್ ಜಂಪ್ ಮಾಡುತ್ತೇವೆ. ಯಾರಿಗೋ ಗುದ್ದುತ್ತೇವೆ, ಸಿಕ್ಕಿಬೀಳುತ್ತೇವೆ. ಕಡೆಗೆ ಯಾವ್ಯಾವುದೋ ಪ್ರಭಾವ ಬ್ಯುಸಿ ಬಚಾವ್ ಆಗಿಬಿಡುತ್ತೇವೆ. ಆದರೆ ಯಾವ ಸಂದರ್ಭದಲ್ಲೂ ಅಪಘಾತಕ್ಕೆ ಈಡಾದವರ ಬಗ್ಗೆ; ಅವರ ಕುಟುಂಬದ ಬಗ್ಗೆ; ಅವರು ಅನುಭವಿಸುವ ಸಂಕಟದ ಬಗ್ಗೆ ಯೋಚಿಸುವುದಿಲ್ಲ. ಆ ಕ್ಷಣದಲ್ಲಿ ನಾವು ಬಚಾವಾಗುವುದಷ್ಟೇ ಮುಖ್ಯವಾಗಿರುತ್ತದೆ!
ಮುಂದಾದರೂ ವೇಗದ ಡ್ರೈವ್ಗೆ ಗುಡ್ಬೈ ಹೇಳೋಣ. ನಿಧಾನವೇ ಪ್ರಧಾನ ಎಂಬುದನ್ನು ಈಗಲಾದರೂ ಅರಿಯೋಣ. ಮುಂದೆ, ಡ್ರೈವಿಂಗ್ಗೆ ಕೂತಾಗಲ್ಲೆಲ್ಲ ಈ ಕಥೆ ನಿಮ್ಮ ನೆನಪಿಗೆ ಬರಲಿ. ಸ್ಪೀಡೆಂಬೋ ಸ್ಪೀಡಿಗೆ ಛಕ್ಕನೆ ಬ್ರೇಕು ಬೀಳಲಿ. ಯಾಕೆಂದರೆ-

ಗುಟ್ಟು ಕಾಪಾಡೋದು ನಂಗೆ ಗೊತ್ತಿಲ್ಲ…

April 15, 2008

namma tejaswi

ತೇಜಸ್ವಿ ಮತ್ತೆ ನೆನಪಾಗುತ್ತಿದ್ದಾರೆ.
ಮೊನ್ನೆ ಏಪ್ರಿಲ್ ೫ಕ್ಕೆ ಅವರು ತೀರಿಕೊಂಡು ವರ್ಷವಾಯ್ತು. ಆದರೆ, ಈವತ್ತಿಗೂ ‘ಕರ್ವಾಲೋ’, ‘ಅಣ್ಣನ ನೆನಪು’, ‘ಚಿದಂಬರ ರಹಸ್ಯ’, ‘ಜಿಮ್ ಕಾರ್ಬೆಟ್’ನ ಬೇಟೆಯ ಪ್ರಸಂಗ ಅಥವಾ ‘ಅಲೆಮಾರಿಯ ಅಂಡಮಾನ್’ ಪುಸ್ತಕ ಓದುತ್ತ ಕುಳಿತರೆ- ಅರೆ, ತೇಜಸ್ವಿ ಇಲ್ಲೇ ನಮ್ಮ ಜತೆಗೇ ಇದ್ದಾರಲ್ಲ? ಅನಿಸುತ್ತದೆ. ಅದರಲ್ಲೂ ‘ಕರ್ವಾಲೋ’ ಓದಲು ಕುಳಿತರಂತೂ ಒಮ್ಮೆ ವಿಜ್ಞಾನಿ ಕರ್ವಾಲೋ ಆಗಿ, ಮತ್ತೊಮ್ಮೆ ಪೆದ್ದ ಮಂದಣ್ಣನಾಗಿ, ಇನ್ನೊಮ್ಮೆ ಗರಂ ಮಸಾಲಾದ ಕರಿಯಪ್ಪನಾಗಿ ತೇಜಸ್ವಿ ಕೈ ಹಿಡಿಯುತ್ತಾರೆ. ಕಾದಂಬರಿ ಓದಿ ಮುಗಿಸಿದಾಗ ಹಾರುವ ಓತಿ ಎಂಬ ಜೀವಿ ರೊಯ್ಯನೆ ಯಾರೂ ಕಾಣದ ನಿಗೂಢ ಲೋಕಕ್ಕೆ ಹಾರಿಹೋಯ್ತು ಎಂಬ ವಾಕ್ಯ- ತೇಜಸ್ವಿಯವರು ನಮ್ಮ ಜತೆಗಿಲ್ಲ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತದೆ.
ನಯ-ನಾಜೂಕು ಎಂಬ ಮಾತಿದೆಯಲ್ಲ, ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಬದುಕಿದವರು ತೇಜಸ್ವಿ. ಯಾರಾದರೂ ನಾಲ್ಕು ಮಂದಿ ಅಪರಿಚಿತರ ಜತೆ ಒಬ್ಬ ಪರಿಚಿತ ಬಂದು ನಿಂತರೆ ನಾವು-ನೀವೆಲ್ಲ ‘ಅವರ ಮುಂದೆ ವಿನಾಕಾರಣ ತಗ್ಗಿ-ಬಗ್ಗಿ ಮಾತಾಡಲು ಶುರುವಿಡುತ್ತೇವೆ. ತೇಜಸ್ವಿ ಹಾಗಿರಲೇ ಇಲ್ಲ. ಪರಿಚಿತನನ್ನು ‘ಥೂ ಹಲ್ಕ, ಹ್ಯಂಗಿದ್ದೀಯೋ ಮಾರಾಯ?’ ಎಂದೇ ಮಾತಿಗೆ ಎಳೆಯುತ್ತಿದ್ದರು. ಜತೆಗಿರುವವರು ಏನೆಂದುಕೊಂಡಾರೊ ಎಂದು ಯೋಚಿಸದೆ, ತಮಗೆ ಅನಿಸಿದ್ದನ್ನು ಹೇಳಿಬಿಡುತ್ತಿದ್ದರು.
ಅದೊಮ್ಮೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಸಂದರ್ಶನ ನಡೀತಿತ್ತು. ಸಾಹಿತ್ಯ ಲೋಕದ ದಿಗ್ಗಜರೆಲ್ಲ ಪ್ರಶ್ನೆ ಕೇಳುವವರ ಸಾಲಿನಲ್ಲಿದ್ದರು. ವೇದಿಕೆಯಲ್ಲಿ ತೇಜಸ್ವಿ! ಸಂದರ್ಶನ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗಿದ್ದಾಗ ಒಬ್ಬರು ಕೇಳಿದರು: ಸರ್, ನಿಮಗೆ ಭಾರತದ ಪ್ರಧಾನಿ ಅಥವಾ ರಾಷ್ಟ್ರಪತಿ ಆಗಲು ಆಹ್ವಾನ ಬಂದ್ರೆ ಒಪ್ತೀರಾ? ಒಪ್ಪೋದಿಲ್ಲ ಅಂದ್ರೆ ಯಾಕೆ ಒಪ್ಪುವುದಿಲ್ಲ ವಿವರಿಸ್ತೀರಾ?’
ತೇಜಸ್ವಿ ತಕ್ಷಣವೇ ಹೇಳಿದರು: ಅಂಥ ಯಾವ ಆಹ್ವಾನಗಳನ್ನು ನಾನು ಒಪ್ಪುವುದಿಲ್ಲ. ಯಾಕೆ ಗೊತ್ತಾ? ಈ ದೇಶದ ರಾಷ್ಟ್ರಪತಿ ಅಥವಾ ಪ್ರಧಾನಿಯಾದರೆ ಅದೆಷ್ಟೋ ಸಾವಿರ ಗುಟ್ಟುಗಳನ್ನು ಕಾಪಾಡಬೇಕಾದ ಹೊಣೆ ನನ್ನ ಮೇಲಿರುತ್ತೆ. ಆದ್ರೆ ಈ ಕೆಲಸ ನನ್ನಿಂದ ಸಾಧ್ಯವೇ ಇಲ್ಲ. ಯಾವುದೇ ಒಂದು ಚಿಕ್ಕ ವಿಷಯ ಗೊತ್ತಾದ್ರೂ ಸಾಕು, ತಕ್ಷಣವೇ ಅದನ್ನು ಇನ್ನೊಬ್ಬರಿಗೆ ದಾಟಿಸಬೇಕು- ಆ ಮೂಲಕ ಒಂದು ವಿಚಿತ್ರ ಖುಷಿ ಅನುಭವಿಸಬೇಕು ಅಂತ ಮನಸ್ಸು ಚಡಪಡಿಸ್ತಾ ಇರುತ್ತೆ. ಒಂದು ಸುದ್ದೀನ ಹತ್ತು ಜನಕ್ಕೆ ಹತ್ತೇ ನಿಮಿಷದಲ್ಲಿ ನಾನು ದಾಟಿಸಿಬಿಟ್ಟಿರ್ತೀನಿ. ಅದರರ್ಥ, ಗುಟ್ಟು ಕಾಪಾಡೋಕೆ ನಂಗೆ ಬರಲ್ಲ. ಗುಟ್ಟು ಕಾಪಾಡೋದು ನನ್ನ ಪಾಲಿಗೆ ದೊಡ್ಡ ಹಿಂಸೆ. ಹಾಗಾಗಿ ಯಾವುದೇ ದೊಡ್ಡ ಹುದ್ದೆಗೆ ಆಫರ್ ಬಂದ್ರೂ ನಾನು ಒಪ್ಪೋದಿಲ್ಲ…
ಈ ಉತ್ತರ ಕೇಳಿ ಪ್ರಶ್ನೆ ಕೇಳಿದ ಕಲಾಕ್ಷೇತ್ರದಲ್ಲಿದ್ದ ಅಷ್ಟೂ ಜನ ನಕ್ಕರು, ತೇಜಸ್ವಿಯವರ ಜತೆಯಲ್ಲೇ…

ನಮ್ಮ ಭಾಪೂಜಿ……

April 10, 2008

gandhi taata
ಗಾಂಧೀಜಿ ಅಂದರೆ ಏನು?
ಈ ಪ್ರಶ್ನೆಗೆ ಹತ್ತು ಜನ, ಹತ್ತು ಬಗೆಯ ಉತ್ತರ ಕೊಡಬಹುದು. ಈ ಸಂಬಂಧ ಒಂದಿಷ್ಟು ಸ್ಯಾಂಪಲ್ಗಳನ್ನು ಹೇಳುವುದಾದರೆ-ಗಾಂಧೀಜಿ ಅಂದರೆ ಮಹಾತ್ಮ. ಗಾಂಧೀಜಿ ಅಂದರೆ ಬಾಪೂ. ಗಾಂಧೀಜಿ ಅಂದರೆ ಸತ್ಯಾಗ್ರಹ. ಗಾಂಧೀಜಿ ಅಂದರೆ ಉಪವಾಸ. ಗಾಂಧೀಜಿ ಅಂದರೆ ಅಹಿಂಸೆ. ಗಾಂಧೀಜಿ ಅಂದರೆ ಪ್ರಾಮಾಣಿಕತೆ. ಗಾಂಧೀಜಿ ಅಂದರೆ ಸರಳತೆ. ಗಾಂಧೀಜಿ ಅಂದರೆ ಸತ್ಯ. ಗಾಂಧೀಜಿ ಅಂದರೆ ಬ್ರಿಟಿಷರೊಂದಿಗೆ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಧೀರ. ಗಾಂಧೀಜಿ-ಅಸ್ಪೃಶ್ಯತೆಯ ನಿವಾರಣೆಗೆ ಎದ್ದು ನಿಂತ ಸಂತ. ಇದೆಲ್ಲದರ ಜತೆಗೆ-ಗಾಂಧಿ ಜಯಂತಿ ಎಂದರೆ- ಆ ಮಹಾತ್ಮನ ಹ್ಯಾಪಿ ಬರ್ತ್ಡೇ; ಮತ್ತು ಗಾಂಧಿ ಮಾರ್ಗವೆಂದರೆ-ಎಂ.ಜಿ. ರಸ್ತೆ!
ಹೌದು, ಗಾಂಧೀಜಿಯ ಬಗ್ಗೆ, ಗಾಂಧಿ ಜಯಂತಿಯ ಬಗ್ಗೆ ಮತ್ತು ಗಾಂಧಿ ಮಾರ್ಗದ ಬಗ್ಗೆ ನಮಗೆ ಗೊತ್ತಿರುವುದೇ ಇಷ್ಟು. ಹೆಚ್ಚಿನ ಸಂದರ್ಭದಲ್ಲಿ ಎಲ್ಲರೂ ಗಾಂಧೀಜಿಯನ್ನು ಊZಠಿeಛ್ಟಿ ಟ್ಛ ಟ್ಠ್ಟ Zಠಿಜಿಟ್ಞ ಎಂದು ಕರೆದು ಸುಮ್ಮನಾಗಿಬಿಡುತ್ತಾರೆ. ಹೀಗೆ ಹೇಳುವ ಬದಲು, ಗಾಂಧೀಜಿಯೆಂದರೆ, ಯಾರಿಗೂ ನಿಲುಕದ ಅತಿ ಮಾನವನಲ್ಲ. ಸುಮಾರು ನೂರಾ ಮೂವತ್ತೊಂಬತ್ತು ವರ್ಷಗಳ ಹಿಂದೆ ಎಲ್ಲರಂತೆಯೇ ಹುಟ್ಟಿ, ಬೆಳೆದು ಮುಂದೆ ‘ಮಹಾತ್ಮ’ ಅನ್ನಿಸಿಕೊಂಡಾತ ಎಂದು ಹೇಳಲು ಮರೆತೇಬಿಡುತ್ತಾರೆ. ಇರಲಿ, ‘ಕರಮಚಂದ ಗಾಂಧಿ ಹಾಗೂ ಪುತಲಿಬಾಯಿಯ ಮಗನಾಗಿ, ೧೮೬೯, ಅಕ್ಟೋಬರ್ ೨ ರಂದು ಪೋರಬಂದರ್ನಲ್ಲಿ ಗಾಂಧೀಜಿ ಜನಿಸಿದರು. ಎಂಬ ಹಳೆಯ ವಿವರಣೆಯ ಬದಲು; ಗಾಂಧೀಜಿಯ ಬದುಕಿನ ಕೆಲವೊಂದು ಸ್ವಾರಸ್ಯಕರ ಪ್ರಸಂಗಗಳು ಇಲ್ಲಿವೆ.
* ಎಲ್ಲರೂ ಬಲ್ಲಂತೆ ಗಾಂಧೀಜಿ ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದವರು. ಯೌವನದ ದಿನಗಳಲ್ಲಿ ಅವರು ನಿಜಕ್ಕೂ ಸೊಗಸುಗಾರ ಪುಟ್ಸಾಮಿ. ಟಿಪ್ಟಾಪ್ ಆದ ಪ್ಯಾಂಟು- ಶರ್ಟು, ಮೇಲೊಂದು ಕೋಟು, ಕೊರಳಿಗೆ ಟೈ, ಶೂಗೆ ದಿನ ದಿನವೂ ಪಾಲಿಶ್… ಇದು ಲಾಯರ್ ಗಾಂಧೀಜಿಯ ಉಡುಗೆಯಾಗಿತ್ತು. ಆದರೆ, ಅದೊಂದು ಸಂದರ್ಭದಲ್ಲಿ ಕೂಲಿ ರೈತರ ಪರ ಹೋರಾಟ ಕ್ಕೆಂದು ಮದ್ರಾಸಿಗೆ ಬಂದ ವರಿಗೆ- ಒಂದು ಲಂಗೋಟಿ, ಒಂದು ಮುಂಡಾಸು ಸುತ್ತಿಕೊಂಡೇ ರೈತರು ಕೆಲಸ ಮಾಡುತ್ತಿರುವುದು ಕಾಣಿಸಿತು. ಛೆ, ನನ್ನ ದೇಶದ ಜನ ಹೀಗೆ ಬಟ್ಟೆಯಿಲ್ಲದೆ ದುಡಿಯುತ್ತಿರುವಾಗ ನಾನು ಶೋಕಿ ಮಾಡುವುದು ಸರಿಯಲ್ಲ ಅನ್ನಿಸಿತು. ಅಂದಿನಿಂದಲೇ ಒಂದು ತುಂಡು ಪಂಚೆ, ಒಂದು ಮುಂಡಾಸಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡರು ಗಾಂಧೀಜಿ.
* ಗಾಂಧೀಜಿಯ ಸಾಬರಮತಿ ಆಶ್ರಮ ನಡೆಯುತ್ತಿದ್ದುದು ದಾನಿಗಳು, ಶ್ರೀಮಂತರು ಉದಾರವಾಗಿ ನೀಡಿದ ಹಣದಿಂದ. ಸಹಜ ವಾಗಿಯೇ ಅವರೆಲ್ಲ ಮೇಲ್ವರ್ಗದವರೇ ಆಗಿದ್ದರು. ಇಂಥ ಸಂದರ್ಭದಲ್ಲಿ ಗಾಂಧೀಜಿ ಅಸ್ಪೃಶ್ಯತೆಯನ್ನು ತೊಡೆದು ಹಾಕಿ ಎಂದದ್ದಲ್ಲದೆ, ತಮ್ಮ ಆಶ್ರಮಕ್ಕೇ ಹರಿಜನರನ್ನು ಕರೆತಂದರಲ್ಲ, ಆಗ ಶ್ರೀಮಂತ ದಾನಿಗಳೆಲ್ಲ ಒಬ್ಬೊಬ್ಬರಾಗಿ ಆಶ್ರಮದಿಂದ ಎದ್ದು ಹೋದರು. ಶ್ರೀಮಂತರೆಲ್ಲ ಎದ್ದು ಹೋದಾಗ ಆಶ್ರಮ ನಡೆಸುವುದೇ ಕಷ್ಟವಾಯಿತು. ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದವರು ಇದನ್ನೇ ಹೇಳಿದಾಗ ಗಾಂಧೀಜಿ ನಿರ್ಲಿಪ್ತರಾಗಿ-ದೇವರಿದ್ದಾನೆ ಬಿಡು. ಏನಾದ್ರೂ ದಾರಿ ತೋರಿಸ್ತಾನೆ ಎಂದರು.
ಮರುದಿನವೇ ಒಂದು ಪವಾಡ ನಡೆದು ಹೋಯಿತು. ಶ್ರೀಮಂತನೊಬ್ಬ ಅನಿರೀಕ್ಷಿತವಾಗಿ ಆಶ್ರಮಕ್ಕೆ ಬಂದು ಆ ಕಾಲಕ್ಕೆ ತುಂಬ ದೊಡ್ಡ ಮೊತ್ತ ನೀಡಿ, ಬಾಪೂ, ನಿಮಗಿದು ನನ್ನ ಅಲ್ಪ ಕಾಣಿಕೆ ಎಂದು ಹೋಗಿಯೇ ಬಿಟ್ಟ.
* ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ
ಗಾಂಧೀಜಿಯ ಭಾಷಣ ವೆಂದರೆ-
ಸಾವಿರ ಸಾವಿರ ಸಂಖ್ಯೆ ಯಲ್ಲಿ ಜನ ಸೇರು ತ್ತಿದ್ದರು. ಆದರೆ, ಇದೇ ಗಾಂಧೀಜಿ, ವಕೀಲರಾಗಿದ್ದ ದಿನಗಳಲ್ಲಿ ವಾದ ಮಾಡಲು ನಿಂತರೆ ಥರಥರನೆ ನಡುಗುತ್ತಿದ್ದರು! ಅವರು ಮೊತ್ತಮೊದಲ ಕೇಸ್ ಕೈಗೆತ್ತಿಕೊಂಡಾಗ-ನ್ಯಾಯಾಲಯದಲ್ಲಿ ಹೇಗೆ ಮಾತಾಡಬೇಕು ಎಂಬ ಬಗ್ಗೆ ಇಡೀ ದಿನ ರಿಹರ್ಸಲ್ ಮಾಡಿದ್ದರು. ಆದರೆ ಕೋರ್ಟ್ಗೆ ಬಂದು, ತಮ್ಮ ಎದುರಾಳಿ ವಕೀಲರನ್ನೂ, ನ್ಯಾಯಾಧೀಶರನ್ನೂ, ನೆರದಿದ್ದ ಜನರನ್ನೂ ಕಂಡಾಗ ಅವರಿಗೆ ತಲೆ ಸುತ್ತಿ ಬಂದಂತಾಯಿತು. ಉರು ಹೊಡೆದಿದ್ದೆಲ್ಲ ಮರೆತುಹೋಯಿತು. ತಕ್ಷಣವೇ, ನಾನು ವಾದ ಮಾಡಲಾರೆ. ಕ್ಷಮಿಸಿ ಎಂದವರೇ ನ್ಯಾಯಾಲಯದಿಂದ ಎದ್ದು ಬಂದೇ ಬಿಟ್ಟರು.
* ಹೋರಾಟ, ಕಾರ್ಯಕ್ರಮ, ಒಪ್ಪಂದದಂಥ ಕೆಲಸಗಳಿಗೆ ಸಂಬಂಧಿಸಿದಂತೆ ವಿದೇಶಗಳಿಗೆ ಗಾಂಧೀಜಿ ಆಗಿಂದಾಗ್ಗೆ ಹೋಗಬೇಕಾಗುತ್ತಿತ್ತು. ಅವರು ತಮ್ಮ ಜೀವಿತಾವಧಿಯಲ್ಲಿ ಒಟ್ಟು ೧೫ ಬಾರಿ ವಿದೇಶ ಪ್ರವಾಸ ಮಾಡಿದ್ದರು. ಆದರೆ, ಒಂದೇ ಒಂದು ಬಾರಿಯೂ ವಿಮಾನದಲ್ಲಿ ಪ್ರಯಾಣಿಸಲಿಲ್ಲ. ಅವರದೇನಿದ್ದರೂ ಸಮುದ್ರಯಾನ. ಹಾಗೊಮ್ಮೆ ಲಂಡನ್ನಿಂದ ಡರ್ಬಾನ್ಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ, ಹಡಗಿನಲ್ಲಿ ಕುಳಿತೇ ಗಾಂಧೀಜಿ ೨೭೫ ಪುಟಗಳ ಪುಸ್ತಕವೊಂದನ್ನು ಬರೆದರು. ಅದರ ಹೆಸರು- ‘ಹಿಂದ್ ಸ್ವರಾಜ್’.
* ಗಾಂಧೀಜಿ ಕೈಗೆ ವಾಚು ಕಟ್ಟುತ್ತಿರಲಿಲ್ಲ. ಬದಲಿಗೆ, ಸೊಂಟದಲ್ಲಿ ಒಂದು ಸ್ಟಾಫ್ ವಾಚ್ ಇಟ್ಟುಕೊಳ್ಳುತ್ತಿದ್ದರು. ಯಾವುದೇ ಕಾರ್ಯಕ್ರಮವಿರಲಿ, ಒಂದೇ ಒಂದು ನಿಮಿಷ ತಡವಾಗಿ ಅವರು ಹೋದವರಲ್ಲ. ಅದೊಂದು ಸಂದರ್ಭದಲ್ಲಿ ಮಾತ್ರ ಯಡವಟ್ಟಾಗಿ ಹೋಯಿತು. ಒಂದು ಕಾರ್ಯಕ್ರಮಕ್ಕೆ ತಾವೇ ಬರುವುದಾಗಿ ಗಾಂಧೀಜಿ ಒಪ್ಪಿದ್ದರು. ಕಾರ್ಯಕ್ರಮದ ಸಿದ್ಧತೆ ಕೂಡ ಜೋರಾಗಿ ನಡೆದಿತ್ತು. ಆದರೆ, ಮನೆಯಿಂದ ಹೊರಡುವುದೇ ತುಸು ತಡವಾಯಿತು. ಪರಿಣಾಮ, ಕಾರ್ಯಕ್ರಮ ಶುರುವಾಗಲು ಇನ್ನು ಐದೇ ನಿಮಿಷ ಬಾಕಿ ಇದೆ ಅನ್ನುವಾಗ ಆ ಜಾಗದಿಂದ ಒಂದು ಕಿ.ಮೀ. ಹಿಂದಿದ್ದರು ಗಾಂಧೀಜಿ. ಹೇಗಾದರೂ ಸರಿ, ಸಮಯಕ್ಕೆ ಸರಿಯಾಗಿ ಆ ಜಾಗ ತಲುಪಬೇಕು ಅನಿಸಿದ ತಕ್ಷಣ-ಒಂದೇ ಸಮನೆ ಓಡಲು ಶುರು ಮಾಡಿದರು. ಹಾಗೆ ಎಕ್ಸ್ಪ್ರೆಸ್ ವೇಗದಲ್ಲಿ ಓಡಿ ಮೂರೇ ನಿಮಿಷದಲ್ಲಿ ಆ ಜಾಗ ತಲುಪಿದರು. ನಂತರ ಎರಡು ನಿಮಿಷ ರೆಸ್ಟ್ ತೆಗೆದುಕೊಂಡರು. ಮರುಕ್ಷಣವೇ, ಗಾಂಧೀಜಿಯ ಭಾಷಣ ಶುರುವಾಗಿ ಹೋಯಿತು!
* ಅದೊಂದು ಸಭೆ. ಅಲ್ಲಿ ಗಾಂಧೀಜಿಯ ಭಾಷಣವಿತ್ತು. ಸಭೆಗೆ ಅವರ ವಿರೋಧಿಗಳೂ ಬಂದಿದ್ದರು. ಗಾಂಧಿಯ ಭಾಷಣ ಶುರುವಾಗುವ ಮೊದಲೇ ವಿರೋಧಿಗಳ ಪೈಕಿ ಒಬ್ಬ ವೇದಿಕೆ ಹತ್ತಿ ಗಾಂಧೀಜಿಯನ್ನು ಯದ್ವಾ ತದ್ವಾ ಬೈದ. ನಂತರ ಪ್ರತಿಭಟನೆಯ ಸಂಕೇತವಾಗಿ ಕಪ್ಪು ಬಾವುಟ ನೀಡಿದ. ಆಗ ಗಾಂಧಿ ಹೇಳಿದರಂತೆ: ‘ಸರಿ, ಇದನ್ನು ನಿನ್ನ ನೆನಪಿಗೆ ಇಟ್ಕೋತೀನಿ. ಗೆಳೆಯಾ, ನಿನ್ನ ಮನಸನ್ನಾದರೂ ಬೆಳ್ಳಗೆ ಇಟ್ಟುಕೋ…’
* ಒಂದು ಹಳ್ಳಿ. ಅಲ್ಲಿ ಒಬ್ಬ ಯುವಕನಿದ್ದ. ಅವನು ಪೋಲಿಯಲ್ಲ, ಅಪಾಪೋಲಿ. ಕುಡಿತ, ಜೂಜು, ಸಿಗರೇಟು ಅವನಿಗೆ ನಿತ್ಯದ ‘ಹಾಬಿ’ ಆಗಿತ್ತು. ಹೀಗಿದ್ದಾಗಲೇ ಊರಿಗೆ ಬಂದ ಸ್ವಾತಂತ್ರ್ಯ ಹೋರಾಟಗಾರರೊಬ್ಬರು- ‘ಧೂಮಪಾನ ಮಾಡಬಾರದು, ಮದ್ಯಪಾನ ಮಾಡಬಾರದು, ಮಾಂಸ ತಿನ್ನಬಾರದು’ ಎಂದು ಗಾಂಧೀಜಿ ಹೇಳಿದ್ದಾರೆ ಎಂದರು. ಈ ಮಾತು ಯುವಕನ ಮನಸ್ಸಿಗೆ ನಾಟಿತು. ಛೆ, ಗಾಂಧೀಜಿ ಹೇಳಿದ ಮೇಲೆ ಅದನ್ನು ಪಾಲಿಸದೆ ಇರುವುದು ಹೇಗೆ ಅಂದುಕೊಂಡ. ಅಂದಿನಿಂದಲೇ ಎಲ್ಲ ದುರಭ್ಯಾಸಗಳಿಗೂ ಸಲಾಂ ಹೊಡೆದ.

ಇವರು ನಮ್ಮ್ ಗಾಂಧೀ ತಾತ…!!!

ಒಂದು ರಾಜನ ಕಥೆ..( ನಮ್ಮ ಕಥೆ)

April 10, 2008

appa amma

ಇದು, ಎಲ್ಲರೂ ಓದಲೇಬೇಕಾದ ಕಥೆ…
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅಂದ ಮೇಲೆ ಕೇಳಬೇಕೆ? ಐಶ್ವರ್ಯಲಕ್ಷ್ಮಿ ಅವನ ಮುಂದೆ ಕಾಲು ಮುರಿದುಕೊಂಡು ಬಿದ್ದಿದ್ದಳು. ಈ ರಾಜನಿಗೆ ಒಬ್ಬರಲ್ಲ, ಇಬ್ಬರಲ್ಲ, ನಾಲ್ವರು ಹೆಂಡತಿಯರಿದ್ದರು.
ರಾಜನಿಗೆ ಸಹಜವಾಗಿಯೇ ನಾಲ್ಕನೇ ಹೆಂಡತಿಯ ಮೇಲೆ ದೊಡ್ಡ ಮೋಹ. ಆಕೆಯನ್ನು ಸಂತೋಷಪಡಿಸಲೆಂದೇ ಆತ ಬದುಕುತ್ತಿದ್ದ. ತನ್ನ ನಾಡಿಗೆ ಯಾವುದೇ ಹೊಸ ಆಭರಣ ಬರಲಿ, ಅದನ್ನು ಕಿರಿಯ ರಾಣಿಗೆ ಕಾಣಿಕೆಯಾಗಿ ಕೊಟ್ಟು, ‘ತಗೋ, ಇದೆಲ್ಲಾ ನಿನಗೆ’ ಅನ್ನುತ್ತಿದ್ದ. ಒಂದೇ ಮಾತಿನಲ್ಲಿ ಹೇಳಿಬಿಡುವುದಾದರೆ, ಕಿರಿಯ ರಾಣಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಈ ರಾಜ ಭೂಪಾಲ ಸಿದ್ಧನಿದ್ದ.
ಮೂರನೇ ಹೆಂಡತಿ ಇದ್ದಳಲ್ಲ. ಅವಳ ಮೇಲೂ ರಾಜನಿಗೆ ಮೋಹವಿತ್ತು. ಆಕೆಯದು ಎಲ್ಲರ ಕಣ್ಣು ಕುಕ್ಕುವಂಥ ವ್ಯಕ್ತಿತ್ವ. ರಾಜ ಆಕೆಯನ್ನು ಸದಾ ಜತೆಗೇ ಇರಿಸಿಕೊಳ್ಳುತ್ತಿದ್ದ. ನೆರೆಹೊರೆಯ ರಾಜರು, ಬಂಧುಗಳು ಬಂದಾಗ, ಮೂರನೇ ರಾಣಿಯನ್ನು ಅವರಿಗೆ ತಪ್ಪದೇ ತೋರಿಸುತ್ತಿದ್ದ. ಅವಳು ಜತೆಗಿರುವುದೇ ನನ್ನ ಸೌಭಾಗ್ಯ. ದಿನಗಳು ಉರುಳಿದಂತೆಲ್ಲಾ ಇವಳ ಖ್ಯಾತಿ ಹೆಚ್ಚಬೇಕೇ ವಿನಃ ಕಡಿಮೆಯಾಗಬಾರದು ಎಂಬುದು ರಾಜನ ಆಸೆಯಾಗಿತ್ತು.
ಇಷ್ಟಾದರೂ, ರಾಜನಿಗೆ ಒಳಗೊಳಗೇ ಹೆದರಿಕೆಯಿತ್ತು; ಈ ಮೂರನೇ ರಾಣಿ ಛಕ್ಕನೆ ಮನಸು ಬದಲಾಯಿಸಿ ಬಂಧುಗಳ ಅಥವಾ ನೆರೆಹೊರೆಯ ರಾಜರಿಗೆ ಒಲಿದುಬಿಟ್ಟರೆ ಗತಿಯೇನು ಎಂಬುದೇ ಅವನ ಹೆದರಿಕೆಗೆ ಮುಖ್ಯ ಕಾರಣವಾಗಿತ್ತು.
ಎರಡನೇ ಹೆಂಡತಿ ಇದ್ದಳಲ್ಲ, ಅವಳ ವಿಷಯವಾಗಿ ರಾಜನಿಗೆ ದೊಡ್ಡ ನಂಬಿಕೆ. ಎಲ್ಲ ರಹಸ್ಯವನ್ನೂ ಅವಳೊಂದಿಗೆ ಸಮಸ್ಯೆಗಳು ಎದುರಾದಾಗ ಆಕೆಯ ಸಲಹೆ ಕೇಳುತ್ತಿದ್ದ. ಆಕೆಯಾದರೂ ಅಷ್ಟೆ. ರಾಜನ ಮೇಲೆ ಅಪಾರ ಪ್ರೀತಿ, ಕರುಣೆ ಹೊಂದಿದ್ದಳು ಅಥವಾ ಹಾಗೆ ತೋರಿಸಿಕೊಳ್ಳುತ್ತಿದ್ದಳು!
ಇನ್ನು, ಮೊದಲ ಹೆಂಡತಿಯನ್ನು ಕಂಡರೆ ರಾಜನಿಗೆ ಏನೋ ತಾತ್ಸಾರ. ಆಕೆ ಇರುವುದೇ ದಂಡ ಎಂಬುದು ಅವನ ಭಾವನೆಯಾಗಿತ್ತು. ಎಷ್ಟೋ ಸಂದರ್ಭದಲ್ಲಿ ಅದನ್ನು ಬಾಯಿಬಿಟ್ಟು ಹೇಳಿಯೂ ಬಿಟ್ಟಿದ್ದ. ಅಂಥ ಮಾತುಗಳಿಂದ ನೋವಾದರೂ ಆಕೆ ತೋರಿಸಿಕೊಂಡಿರಲಿಲ್ಲ. ಬದಲಿಗೆ, ಗಂಡನ ತಿರಸ್ಕಾರದ ನಂತರವೂ ಆತನನ್ನು ತೀವ್ರವಾಗಿ ಇಷ್ಟಪಡುತ್ತಿದ್ದಳು. ಆಕೆ ತನ್ನ ಬಗ್ಗೆ ಹೆಚ್ಚು ಕೇರ್ ತೆಗೆದುಕೊಂಡಾಗಲೆಲ್ಲ ಇವನಿಗೆ ಒಂಥರಾ ಕಿರಿಕಿರಿಯಾಗುತ್ತಿತ್ತು…
ಕಾಲಚಕ್ರ ಉರುಳಿತು. ಈ ರಾಜ ದಿಢೀರ್ ಕಾಯಿಲೆ ಬಿದ್ದ. ಎಷ್ಟೆಲ್ಲ ಔಷಧ ಸೇವಿಸಿ, ಚಿಕಿತ್ಸೆ ಪಡೆದರೂ ಕಾಯಿಲೆ ಗುಣವಾಗಲಿಲ್ಲ. ಬದಲಿಗೆ ಹೆಚ್ಚುತ್ತಲೇ ಹೋಯಿತು. ಓಹ್, ಈ ರೋಗ ಎಂದೆಂದೂ ವಾಸಿಯಾಗುವುದಿಲ್ಲ. ನನ್ನ ಕಡೆಗಾಲ ಸಮೀಪಿಸಿದೆ ಎಂದು ರಾಜನಿಗೂ ಖಚಿತವಾಗಿ ಗೊತ್ತಾಯಿತು. ತಕ್ಷಣ ಅವನಿಗೆ ನಾಲ್ವರು ಹೆಂಡತಿಯರ ನೆನಪಾಯಿತು. ಬದುಕಿಡೀ ಜತೆಯಾಗಿಯೇ ಇದ್ದವರನ್ನು ಸಾವಿನ ಸಂದರ್ಭದಲ್ಲೂ ಜತೆಗೆ ಬನ್ನಿ ಎಂದು ಕರೆವ ಆಸೆಯಾಯಿತು.
ಆತ ತಕ್ಷಣ ನಾಲ್ಕನೇ ಹೆಂಡತಿಯನ್ನು ಕರೆದು ಹೇಳಿದ: ‘ನೋಡು ಚಿನ್ನಾ, ಇಷ್ಟು ವರ್ಷ ನಿನ್ನ ಸಂತೋಷಕ್ಕೆ ಅಂತಾನೇ ಬದುಕಿದೆ. ನಿನ್ನ ನಗುವೇ ನನ್ನ ಸೌಭಾಗ್ಯ ಎಂದುಕೊಂಡೆ. ಆದರೆ, ಈಗ ನನ್ನ ಕಡೆಗಾಲ ಬಂದೇ ಬಿಟ್ಟಿದೆ. ಒಂಟಿಯಾಗಿ ಸಾಯಲು ವಿಪರೀತ ಭಯ. ಪ್ಲೀಸ್, ಸಾವಿನಲ್ಲೂ ನನ್ನೊಂದಿಗೆ ಬರುವೆಯಾ…?
ಮಾತು ಕೇಳಿ ಕಿರಿಯ ಹೆಂಡತಿ ‘ಛೀ’ ಎಂದಳು. ‘ಎಂಥ ಅಪಶಕುನದ ಮಾತು ರೀ ನಿಮ್ದು? ನೀವು ಸತ್ತರೆ ಅದು ನಿಮ್ಮ ಕರ್ಮ. ಸತ್ತಾಗ ನಾನೂ ನಿಮ್ಮೊಂದಿಗೆ ಬರಬೇಕು ಅನ್ನೋದು ಯಾವ ನ್ಯಾಯ? ನಾನಂತೂ ಬರಲಾರೆ. ನಿಮಗೆ ದೊಡ್ಡ ನಮಸ್ಕಾರ’ ಎಂದು ಹೇಳಿ ಸರಭರನೆ ಹೋಗಿಯೇ ಬಿಟ್ಟಳು.
ರಾಜನಿಗೆ ಬೀಸಿ ಹೊಡೆದಂತಾಯಿತು. ಬಿ.ಪಿ. ದಿಢೀರ್ ಹೆಚ್ಚಿತು. ಆದರೂ ಹೇಗೋ ತನ್ನನ್ನು ತಾನೇ ಕಂಟ್ರೋಲ್ ಮಾಡಿಕೊಂಡ. ಆಗಲೇ ಆತನಿಗೆ ಮೂರನೇ ಹೆಂಡತಿ ನೆನಪಾದಳು. ಪ್ರತಿ ಪ್ರವಾಸದ ಸಂದರ್ಭದಲ್ಲೂ ಜತೆಗೇ ಬರುತ್ತಿದ್ದ ಆಕೆ ಈ ಕಡೆಯ ಯಾತ್ರೆಯಲ್ಲೂ ಬಂದೇ ಬರ್ತಾಳೆ ಎಂದು ನಂಬಿ ಆಕೆಯನ್ನು ಕರೆದ. ತನ್ನ ಪರಿಸ್ಥಿತಿ ವಿವರಿಸಿ- ಈ ಕಡೆಯ ಯಾತ್ರೆಯಲ್ಲೂ ಜತೆಗೆ ಬರ್ತೀಯ ತಾನೆ’ ಎಂದು ಕೇಳಿದ.
‘ಛೆ, ಛೆ, ನಾನ್ಯಾಕೆ ಹಾಗೆ ಮಾಡ್ಲಿ? ಆಯಸ್ಸು ಮುಗೀತಾ ಬಂದಿರೋದು ನಿಮ್ದು. ಕ್ಷಮಿಸಿ, ನಿಮ್ಮೊಂದಿಗೆ ನಾನು ಬರಲಾರೆ. ನಿಮ್ಮ ನಿಧನಾನಂತರ ನಾನು ಬೇರೆಯವರೊಂದಿಗೆ ಬದುಕ್ತೇನೆ..’. ಎಂದಳಾಕೆ.
ಈ ಮಾತು ಕೇಳಿದ ರಾಜನಿಗೆ ಈಟಿಯಿಂದ ನೇರ ಹೃದಯವನ್ನೇ ಮೀಟಿದಂತಾಯಿತು. ಕೆಲ ಸಮಯದ ನಂತರ ಚೇತರಿಸಿಕೊಂಡು ಎರಡನೇ ಹೆಂಡತಿಯನ್ನು ಕರೆದು ಹೀಗೆಂದ: ‘ರಾಣೀ, ಈವರೆಗಿನ ಬದುಕಿನಲ್ಲಿ ಕಷ್ಟ-ಸುಖದ ಸಂದರ್ಭಗಳಲ್ಲಿ ನೀನಿದ್ದೆ. ತುಂಬ ಸಮಸ್ಯೆಗಳಿಗೆ ಪರಿಹಾರ ಹೇಳಿದೆ. ಈಗ ನಾನು ಒಂಟಿಯಾಗಿ ಸಾಯಲು ಇಷ್ಟಪಡಲಾರೆ. ಈ ಸಮಸ್ಯೆಗೆ ಒಂದು ಪರಿಹಾರ ಹೇಳು…’
ರಾಣಿ ಉದಾಸೀನದಿಂದ ಹೀಗೆಂದಳು: ‘ಪ್ರಭೂ, ಈವರೆಗೆ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಹೇಳಿದೆ ನಿಜ. ಆದರೆ ಈಗ ನಿಮಗೆ ಯಾವ ಸಲಹೆಯನ್ನೂ ನೀಡಲಾರೆ. ಇನ್ಮೇಲೆ ನನ್ನ ದಾರಿ ನನಗೆ, ನಿಮ್ಮ ದಾರಿ ನಿಮಗೆ…’
ಇಷ್ಟು ಹೇಳಿ ಎರಡನೇ ಹೆಂಡತಿಯೂ ಹೋಗಿಬಿಟ್ಟಳು. ಆಗ ರಾಜನಿಗೆ ವಿಪರೀತ ನೋವಾಯಿತು. ತನ್ನ ಸ್ಥಿತಿಗಾಗಿ ಆತ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ. ಎರಡು ನಿಮಿಷ ಅತ್ತಿರಬೇಕು, ಅಷ್ಟರಲ್ಲಿ ಬಾಗಿಲ ಹಿಂದೆ ಯಾವುದೋ ನೆರಳು ಸರಿದಾಡಿದಂತಾಯಿತು. ರಾಜ ಕುತೂಹಲದಿಂದ ಅತ್ತ ನೋಡಿದರೆ-ಅಲ್ಲಿ ಮೊದಲ ಹೆಂಡತಿ ನಿಂತಿದ್ದಳು. ಆಕೆಯ ಕಂಗಳಲ್ಲಿ ದುಗುಡವಿತ್ತು. ಈ ರಾಜ ಬೆಪ್ಪು ಬೆಪ್ಪಾಗಿ ನೋಡುತ್ತಿದ್ದಾಗ ಆಕೆಯೇ ಹೇಳಿದಳು: ‘ರಾಜಾ, ಹೆದರಬೇಡ. ಸಾವಿನ ಮನೆಗೆ ನೀನು ಒಂಟಿಯಾಗಿ ಹೋಗಲು ನಾನು ಬಿಡಲಾರೆ. ನಿನ್ನೊಂದಿಗೆ ನಾನೂ ರ್ತೀನಿ. ಸಾವಿನ ನಂತರವೂ ಒಂದು ಬದುಕಿದೆ ಅನ್ನುವುದಾದರೆ ಅಲ್ಲಿ ಕೂಡ ನಿನ್ನನ್ನು ಪ್ರೀತಿಯಿಂದ ನೋಡ್ಕೋತೀನಿ…’
ಈ ಮಾತು ಕೇಳಿ ರಾಜನಿಗೆ ವಿಪರೀತ ಪಾಪಪ್ರಜ್ಞೆ ಕಾಡಿತು. ಆತ ಮೊದಲ ಹೆಂಡತಿಯ ಕೈ ಹಿಡಿದು ಕಣ್ಣಿಗೊತ್ತಿಕೊಂಡ. ಹಿಂದೆಯೇ ಸಂತೋಷದಿಂದ ಅಳಲಾರಂಭಿಸಿದ…
***
ಕಥೆ ಮುಗೀತಾ ಎಂದು ಪ್ರಶ್ನೆ ಕೇಳಬೇಡಿ.
ಈಗ ಹುಷಾರಾಗಿ ಕೇಳಿಸಿಕೊಳ್ಳಿ: ನಾನು-ನೀವು ಎಲ್ಲರೂ ರಾಜನ ಪಾತ್ರಧಾರಿಗಳೇ!
ಸ್ವಾರಸ್ಯವೆಂದರೆ, ನಮಗೂ ನಾಲ್ವರು ಹೆಂಡತಿಯರಿದ್ದಾರೆ!!
ನಾಲ್ಕನೆಯ, ಅತ್ಯಂತ ಮುದ್ದಿನ ಹೆಂಡತಿ ಯಾರು ಗೊತ್ತೆ?
ನಮ್ಮ ದೇಹ! ಅದರ ಮೇಲೆ ನಮಗೆ ಇನ್ನಿಲ್ಲದ ವ್ಯಾಮೋಹ. ಅದಕ್ಕೆ ಪನ್ನೀರು ಚಿಮುಕಿಸುವುದೇನು? ಬಗೆಬಗೆಯ ಸೋಪು, ಪೌಡರ್ ಹಾಕಿ ಘಂ ಅನಿಸುವುದೇನು? ಹೊಸ ಬಟ್ಟೆ, ಆಭರಣ ಧರಿಸಿ ಸಂಭ್ರಮ ಪಡುವಾಗಿನ ನಮ್ಮ ಗತ್ತೇನು, ವಾಹ್, ವಾಹ್…
ಆದರೆ, ನಾವು ಇಷ್ಟೆಲ್ಲಾ ಪ್ರೀತಿಸುವ, ಇಷ್ಟಪಡುವ ನಮ್ಮ ದೇಹ, ಉಸಿರು ನಿಂತೊಡನೆಯೇ ನಮ್ಮಿಂದ ದೂರವಾಗಿಬಿಡುತ್ತದೆ!
ಹೌದು ತಾನೆ? ನಮ್ಮ ಬದುಕಿನ ವೈಭವದ ದಿನಗಳಲ್ಲಿ ಅಧಿಕಾರ, ಅಂತಸ್ತು ಮತ್ತು ಸಂಪಾದನೆಯನ್ನು ಎಲ್ಲರಿಗೂ ಹೆಮ್ಮೆಯಿಂದ ತೋರಿಸಿಕೊಂಡು ಓಡಾಡಿರುತ್ತೇವೆ. ಸಂಪಾದನೆ ಎಂಬುದು ಸತ್ತ ನಂತರವೂ ಜತೆಗಿರುತ್ತದೆ ಎಂಬ ಭ್ರಮೆ ನಮ್ಮದು. ಆದರೆ, ನಾವು ಜೀವ ಬಿಟ್ಟ ಮರುಕ್ಷಣದಿಂದಲೇ ನಿಮ್ಮ ಅಧಿಕಾರ, ಹಣ, ಆಸ್ತಿ, ಸಂಪಾದನೆ ಇನ್ನಾರದೋ ಪಾಲಾಗುತ್ತದೆ. ಹೌದು. ನಮ್ಮ ಇದು ಮೂರನೇ ಹೆಂಡತಿ!
ಎರಡನೇ ಹೆಂಡತಿ ಬೇರೆ ಯಾರೂ ಅಲ್ಲ-ನಮ್ಮ ಗೆಳೆಯ, ಗೆಳತಿಯರು! ನಾವು ಗೆಲುವಿನ ಹಾದಿಯಲ್ಲಿದ್ದ ಸಂದರ್ಭಗಳಲ್ಲಿ ಎಲ್ಲ ಸಂಗತಿಗಳನ್ನೂ ಅವರೊಂದಿಗೆ ಹೇಳಿಕೊಂಡಿರುತ್ತೇವೆ. ಸಲಹೆ ಕೇಳಿರುತ್ತೇವೆ,ಅದರಂತೆಯೇ ನಡೆದುಕೊಂಡಿರುತ್ತೇವೆ. ಆದರೂ, ನಾವು ಸತ್ತು ಹೋಗುವುದು ಗ್ಯಾರಂಟಿ ಅನ್ನಿಸಿದಾಗ ಯಾರೂ ನೆರವಿಗೆ ಬರುವುದಿಲ್ಲ. ಬದಲಿಗೆ, ದೂರದಲ್ಲಿ ನಿಂತೇ ಟಾಟಾ ಮಾಡಿಬಿಡುತ್ತಾರೆ!
ಪ್ರಿಯ ಓದುಗಾ, ಇಷ್ಟು ಓದಿದ ನಂತರ-ಆ ಮೊದಲನೆ ಹೆಂಡತಿ ಯಾರೆಂದು ತಿಳಿಯುವ ಕುತೂಹಲವೇ? ಕೇಳು: ಅದು ಇನ್ಯಾರೂ ಅಲ್ಲ- ನಮ್ಮ ಪೋಷಕರು, ತಾಯ್ತಂದೆಯರು!
ಯಾಕೆ ಹಾಗೆ ಮಾಡ್ತೀವಿ? ಗೊತ್ತಿಲ್ಲ. ಆದರೆ, ನಾವೆಲ್ಲರೂ ನಮ್ಮ ತಾಯ್ತಂದೆಯರನ್ನು ತಾತ್ಸಾರದಿಂದ ನೋಡ್ತೀವಿ. ಅವರು ನಮ್ಮ ಬದುಕಿಗೆ ಭಾರವಾದವರು ಅಂದುಕೊಳ್ತೀವಿ. ಅವರು ನಮ್ಮ ಜತೆಗೆ ಇರುವುದೇ ಬೇಡ ಎಂದು ಎಷ್ಟೋ ಬಾರಿ ಅಂದುಕೊಳ್ತೀವಿ. ಅದನ್ನು ನಾಚಿಕೆಯಿಲ್ಲದೇ ಅವರೆದುರು ನಿಂತು ಹೇಳಿಯೂಬಿಡ್ತೀವಿ!
ಆದರೆ, ಅಂಥ ಹೇಳಿಕೆಗಳಿಂದ ಮರ್ಮಾಘಾತವಾದರೂ ನಮ್ಮ ತಾಯ್ತಂದೆಯರು ಮುನಿಯುವುದಿಲ್ಲ. ಬದಲಾಗಿ, ಸದಾ ನಮ್ಮ ಒಳಿತನ್ನೇ ಬಯಸುತ್ತಾರೆ. ಆಕಸ್ಮಾತ್ ನಾವು ಕಾಯಲೆ ಬಿದ್ದರೆ ಶುಶ್ರೂಷೆಗೆ ನಿಲ್ಲುತ್ತಾರೆ. ನಮ್ಮ ಒಳ್ಳೆಯದಕ್ಕೆಂದೇ ಪೂಜೆ ಮಾಡಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಎಲ್ಲ ಪ್ರಯತ್ನಗಳ ನಂತರವೂ ನಾವು ಸತ್ತೇ ಹೋದರೆ, ಆಗಲೂ ತೀವ್ರ ಶೋಕದಿಂದ ಹಿಂದೆಯೇ ಬರುತ್ತಾರೆ. ಕೆಲವರಂತೂ ಮಕ್ಕಳ ಅಗಲಿಕೆ ಸಹಿಸದೆ ತಾವೂ ಸತ್ತು ಹೋಗುತ್ತಾರೆ!
ಅದರರ್ಥ ಇಷ್ಟೆ: ಈ ಕಥೆಯಲ್ಲಿನ ರಾಜನಿಗೆ ಬಂದ ದುರ್ಗತಿ ನಿಮಗೆ ಬರಬಾರದು ಅನ್ನುವುದಾದರೆ ಪ್ಲೀಸ್, ಮನೆಯಲ್ಲಿರುವ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ…
ಅಂದ ಹಾಗೆ, ನಿಮ್ಮ ಅಪ್ಪ-ಅಮ್ಮ ಹೇಗಿದ್ದಾರೆ?